- ಮಲಯಾಳದ ಮುಖಮುದ್ರೆ ಎಂ.ಟಿ.ಗೆ ಸಾಂಸ್ಕೃತಿಕ ಕೇರಳದ ಅಂತಿಮ ನಮನ
ಮಲಯಾಳಂ ಭಾಷೆಗೆ ಅತ್ಯುತ್ತಮ ಸಾಹಿತ್ಯಗಳನ್ನೊದಗಿಸಿ ರಾಷ್ಟ್ರೀಯ ಮಟ್ಟದಲ್ಲಿ ಮಲಯಾಳದ ವಿಜಯಧ್ವಜ ಹಾರಾಡಿಸಿದ ಕೇಲಳೀಯರ ಪ್ರಿಯ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ (91)ಕೋಝಿಕ್ಕೋಡಿನಲ್ಲಿ ನಿನ್ನೆ ರಾತ್ರಿ ನಿಧನರಾದರು. ಮಲಯಾಳದ ಮನಗೆದ್ದ ಬರಹಗಾರನ ಅಗಲುವಿಕೆಗೆ ಇಂದಿಡೀ ಕೇರಳದ ಸಾಂಸ್ಕೃತಿಕ, ಸಾರಸ್ವತ ಮನಸ್ಸು ಕಂಬನಿ ಮಿಡಿಯುತ್ತಿದೆ.
ಎಂ.ಟಿ ಎಂಬ ಎರಡಕ್ಷರದಲ್ಲೇ ಮಲಯಾಳ ಮನಸನ್ನು ಸೂರೆಗೈದಿದ್ದ ಅವರು ಕಾದಂಬರಿ, ಸಣ್ಣಕತೆ, ಚಿತ್ರಕಥೆ, ಮಕ್ಕಳ ಸಾಹಿತ್ಯ, ಪ್ರವಾಸಕಥನ, ಪ್ರಬಂಧ, ಪತ್ರಿಕಾ ಸಂಪಾದಕನಾಗಿ ಪತ್ತಿಕಾ ಬರಹ ಹೀಗೆ ಅಕ್ಷರ ಮತ್ತು ದೃಶ್ಯ ಮಾಧ್ಯಮ(ಸಿನಿಮ) ಗಳಲ್ಲಿ ನಡೆಸಿದ ಸೃಜನಶೀಲ ಪ್ರಯೋಗಗಳಿಂದ ಮಲಯಾಳದಲ್ಲಿ ಭೀಮ ಹೆಜ್ಜೆಯನ್ನೂರಿ ಅಳಿಸಲಾಗದ ಛಾಪೊತ್ತಿ ನಿರ್ಗಮಿಸಿದ್ದಾರೆ.
ಹೃದಯಾಘಾತದಿಂದ ಬಳಲಿ ಕಳೆದ 11ದಿನಗಳಿಂದ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರು ಕಳೆದ ಕೆಲದಿನದಿಂದ ವೆಂಟಿಲೇಟರಿನಲ್ಲಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಕಾರಣ ವೆಂಟಿಲೇಟರ್ ತೆಗೆದಾಗ ಆರೋಗ್ಯ ಮತ್ತೆ ಹದಗೆಟ್ಟು ಮರಣ ಸಂಭವಿಸಿತು.
ಮೃತದೇಹವನ್ನು ಕೋಝಿಕ್ಕೋಡಿನ ಅವರ ವಸತಿಯಲ್ಲಿರಿಸಲಾಗಿದೆ. ಮಲಯಾಳಂ ಸಾಹಿತ್ಯ ಮತ್ತು ಸಿನಿಮ , ರಾಜಕೀಯ ರಂಗದ ಗಣ್ಯರೆಲ್ಲರೂ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸರಕಾರ ಶೋಕಾಚರಣೆ ಘೋಷಿಸಿದೆ. ಇಂದು ಸಂಜೆ ಕೇರಳದ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.