ಏತಡ್ಕ:
” ಜೀವನದ ಏಳಿಗೆಗೆ ಸದಾಶಿವನ ನಂಬಿದೆ.ಜಾರುವ ನೀರಿನ ಜೊತೆ ಜಾರಲಿಲ್ಲ . ಕಠಿಣ ಶ್ರಮ, ಶ್ರದ್ಧೆಯಿಂದ ಧರ್ಮ ಮಾರ್ಗದಲ್ಲೇ ಉದ್ಯಮವನ್ನು ಕಟ್ಟಿಬೆಳೆಸಿದೆ. ಕಲಬೆರಕೆ ನಡೆ ನುಡಿ ಬಿಟ್ಟು ದೇವರ ಕೆಲಸದಲ್ಲಿ ಶ್ರದ್ಧೆ ಮತ್ತು ತನು ಮನ ದಾನದಿಂದಲೂ ಗುರಿ ತಲುಪಬಹುದು ” ಎಂಬುದಾಗಿ ಯಶಸ್ವೀ ಉದ್ಯಮಿ, ಜನಪ್ರಿಯ ಅನನ್ಯ ಫೀಡ್ಸ್ ಮ್ಹಾಲಕರಾದ ದಿವಾಣ ಗೋವಿಂದ ಭಟ್ಟರು ನುಡಿದರು.
ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಬಾವಿ ಶ್ರಮದಾನ ಸೇವೆ- 8 ರ ಸಭಾ ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಹೀಗೆಂದರು.
ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರರಾದ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೆನರಾ ಬ್ಯಾಂಕ್ ಬಡಾವಣೆಯ ಶ್ರೀ ಸಂಪತ್ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೈ.ಶಿವರಾಮ ಭಟ್ ಹಾಗೂ ಮಾತೃ ಮಂಡಳಿ ಮುಖ್ಯಸ್ಥೆ ಉಷಾ ಶಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಚೈತ್ರ ಅಶ್ವಿನಿ ಬದಿಯಡ್ಕ, ಕಿರಣಾ ಕೃಷ್ಣ ಮೂರ್ತಿ, ಸುಧಾ ಮಾಣಿತ್ತೋಡಿ , ಡಾ.ಅನ್ನಪೂರ್ಣೇಶ್ವರಿ ಏತಡ್ಕ ಶಿವಾರ್ಪಣಂ ಆಶಯ ಗೀತೆ ಹಾಡಿದರು. ಸಮಿತಿಯ ಸಹ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಪರಿಚಯ ಮಾಡಿದರು.ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶ್ರಮದಾನ ಸೇವೆಯು ಅಭೂತಪೂರ್ವವಾಗಿ ನಡೆಯಿತು.ಬೆಂಗಳೂರು ಹೈಕೋರ್ಟ್ ವಕೀಲರಾದ ವೈ.ಹೆಚ್.ಗಣೇಶ್ ಈ ಸೇವೆಯನ್ನು ಪ್ರಾಯೋಜಿಸಿದ್ದರು