- ಕಾಸರಗೋಡಿನಲ್ಲಿ ಬಾಂಗ್ಲಾ ಉಗ್ರಗಾಮಿ 6ವರ್ಷಗಳಿಂದ ನೆಲೆಸಿದ್ದರೂ ಗುರುತಿಸಲಾಗದ್ದು ಕೇರಳ ಪೋಲೀಸ್ ನಿಷ್ಕ್ರಿಯತೆಗೆ ಕನ್ನಡಿ : ಹಿಂದೂಐಕ್ಯವೇದಿಕೆ
- ಕಾಸರಗೋಡು ಉಗ್ರರ ಅಡಗುತಾಣ ಆಗುತ್ತಿರುವುದು ನಾಡಿನ ಶಾಂತಿ, ನೆಮ್ಮದಿಗೆ ಆತಂಕ : ರಾಜನ್ ಮುಳೀಯಾರ್
ಕಾಸರಗೋಡು ಜಿಲ್ಲೆ ಉಗ್ರಗಾಮಿಗಳ ಪಾಲಿಗೆ ಸುರಕ್ಷಿತ ಅಡಗುದಾಣದ ಅಭಯ ಕೇಂದ್ರವಾಗಿ ಮಾರ್ಪಟ್ಟರೂ ಕೇರಳ ಪೋಲೀಸರಿಗೆ ಉಗ್ರಗಾಮಿಗಳ ಯಾವೊಂದು ಸುಳಿವೂ ಸಿಗದಿರುವುದು ಗೃಹ ಇಲಾಖೆಯ ಕಾರ್ಯದಕ್ಷತೆಯ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ ಎಂದು ಹಿಂದೂ ಐಕ್ಯವೇದಿಕೆ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್ ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಉಗ್ರಗಾಮಿ ಷಾಬ್ ಶೈಕ್ ಅಹ್ಮದ್ ಎಂಬಾತ ಕಾಸರಗೋಡು ಜಿಲ್ಲೆಯಲ್ಲಿ ವಿವಿದೆಡೆ ನೆಲೆ ಬದಲಾಯಿಸಿ ವಾಸಿಸುತ್ತಾ ಇದ್ದು, ಕಾಞಂಗಾಡು ಬಳಿಯಿಂದ ಅಸ್ಸಾಂ ಪೋಲೀಸ್ ನ ವಿಶೇಷ ದಳ (ಏಸ್ ಟಿ ಎಫ್) ಬಂಧಿಸಿರುವುದೇ ಇದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ರಾಜನ್ ಮುಳಿಯಾರ್ ಉಲ್ಲೇಖಿಸಿದ್ದಾರೆ. ಕೇರಳ ಪೋಲೀಸರ ಈ ನಿಷ್ಕ್ರಿಯತೆ ಶಾಂತಿ, ನೆಮ್ಮದಿ ಬಯಸುವ ಜಿಲ್ಲೆಯ ಜನಜೀವನಕ್ಕೆ ಆತಂಕಕಾರಿಯಾಗಿದೆ ಎಂದು ಅವರು ಕಳವಳ ಪ್ರಕಟಿಸಿದ್ದಾರೆ.
ಕಾಞಂಗಾಡು ಬಳಿಯ ನೀಲೇಶ್ವರ ಪಡನ್ನಕಾಡಿನಿಂದ ಬಾಂಗ್ಲಾದೇಶದ ಉಗ್ರಗಾಮಿಯನ್ನು ಕೇರಳ ಪೋಲೀಸರ ಸಮಕ್ಷಮ ಅಸ್ಸಾಂ ಎಸ್ ಟಿ ಎಫ್ ಬಂಧಿಸಿ ಕೊಂಡೊಯ್ಯತ್ತಿರುವುದು…
ಹಿಂದೂ ನಾಯಕರನ್ನು ಮತ್ತು ದೇವಾಲಯಗಳನ್ನು ಆಕ್ರಮಿಸುವ ಗೂಢ ಸಂಚಿನೊಂದಿಗೆ 2018ರಿಂದಲೇ ಈತ ಕಾಸರಗೋಡಿನ ವಿವಿದೆಡೆ ನೆಲೆ ಬದಲಾಯಿಸಿ ವಾಸಿಸುತ್ತಿದ್ದ. ಆದರೆ ಈ ಕುರಿತು ಯಾವುದೇ ಸುಳಿವು ಕೇರಳಾ ಪೋಲೀಸರಿಗೆ ದೊರೆತಿಲ್ಲ ಎಂಬುದು ಪೋಲೀಸರ ಕಾರ್ಯದಕ್ಷತೆಯನ್ನೇ ಪ್ರಶ್ನಿಸಿ ಆತಂಕ ಪಡುವಂತಾಗಿದೆ ಎಂದವರು ತಿಳಿಸಿದ್ದಾರೆ.
ಉಗ್ರಗಾಮಿಯನ್ನು ಬಂಧಿಸಿ ಕೊಂಡೊಯ್ದಲ್ಲಿಗೆ ಸಮಸ್ಯೆ ಮುಗಿದಿಲ್ಲ. ಉಗ್ರಗಾಮಿಗಳಿಗೆ ಆಸರೆ, ಸಹಾಯ ಒದಗಿಸಿದವರು ಯಾರೆಂಬುದನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ಅನ್ಯ ರಾಜ್ಯ ಕಾರ್ಮಿಕರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಇವರ ನಡುವೆ ಉತ್ತರ ಭಾರತೀಯ ಕಾರ್ಮಿಕರ ಸೋಗಿನಲ್ಲಿ ಉಗ್ರರು ಅಡಗಿದ್ದಾರೋ, ಅಕ್ರಮವಾಗಿ ನುಸುಳಿಬಂದ ಬಾಂಗ್ಲಾದೇಶಿಗಳಿದ್ದಾರೋ ಎಂಬುದನ್ನು ಅನಿವಾರ್ಯ ಗುರುತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಞಂಗಾಡು ಬಳಿ ಕಾರ್ಮಿಕನ ಸೋಗಿನಲ್ಲಿ ಕಳೆದ 6ವರ್ಷಗಳಿಂದ ಬಾಂಗ್ಲಾ ಮೂಲದ ಉಗ್ರ ನೆಲೆಸಿದ್ದನೆಂಬುದು ನಿರ್ಲಕ್ಷಿತ ಘಟನೆಯಲ್ಲ. ಈತನಿಗೆ ಕೇರಳದಲ್ಲಿ ಸಹಾಯ ನೀಡಿದ್ಯಾರು ಮತ್ತು ಈತನ ಸಹಚರರು ಇನ್ನೂ ಉಳಿದಿದ್ದಾರೋ ಎಂಬ ತನಿಖೆ ಕೇರಳ ಪೊಲೀಸ್ ಇಲಾಖೆಯಿಂದ ನಡೆಯಬೇಕು ಎಂದವರು ಆಗ್ರಹಿಸಿದರು.
ಹಿಂದೂ ಐಕ್ಯ ವೇದಿಕೆ ಜಿಲ್ಲಾ ಸಮಿತಿ ಸಭೆಯಲ್ಲಿ ಜಿಲ್ಲಾ ರಕ್ಷಾಧಿಕಾರಿ ಗೋವಿಂದನ್ ಮಾಸ್ಟರ್ ಕೊಟ್ಟೋಡಿ , ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ಜಿಲ್ಲಾ ಕಾರ್ಯದರ್ಶಿ ಮೋಹನನ್ ವಾಯಕ್ಕೋಡ್ ಮೊದಲಾದವರು ಕಾಸರಗೋಡು ಜಿಲ್ಲೆಯಲ್ಲಿ ಉಗ್ರಗಾಮಿ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.
ಹಿಂದೂ ಐಕ್ಯ ವೇದಿಕೆ ರಾಜ್ಯ ಖಜಾಂಜಿ ಓಮನಾಮುರಳಿ ಸ್ವಾಗತಿಸಿದರು. ಸಂಘಟನಾ ಸೆಕ್ರೆಟರಿ ಸುಧಾಕರನ್ ಕೊಳ್ಳಿಕೋಡ್ ವಂದಿಸಿದರು
.