- ತಾಳಮದ್ದಳೆಗೆ ವರ್ತಮಾನದಲ್ಲಿ ಪ್ರೇಕ್ಷಕರ ಕೊರತೆಯಂತೆಯೇ ಭರವಸೆಯ ಉದಯೋನ್ಮುಖ
ಕಲಾವಿದರ ಕೊರತೆಯೂ ಕಾಡುತ್ತಿದೆ : ಕಲಾಚಿಂತಕ, ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ - ಉಡುಪಿ ಬಳಿಯ ಪಡುಕುತ್ಯಾರು ಆನೆಗುಂದಿ ಮಠದಲ್ಲಿ ತಾಳಮದ್ದಳೆ ಸಪ್ತಾಹ ಆರಂಭ

ಪಡುಕುತ್ಯಾರು: ಕೇವಲ ಮಾತಿನಲ್ಲೇ ರಂಗಮಂಟಪ ಕಟ್ಟುವ ಕನ್ನಡದ ಕಮನೀಯ ಕಲೆ ಯಕ್ಷಗಾನ ತಾಳಮದ್ದಳೆಗಳ ಪಾಲಿಗಿದು ಸ್ಥಿತ್ಯಂತರದ ಕಾಲ.
ಹವ್ಯಾಸಿ ತಾಳಮದ್ದಳೆ ಸಂಘಗಳು ಮತ್ತು ವಾರದ ಕೂಟಗಳೆಲ್ಲ ಗ್ರಾಮಗಳಿಂದ ಕಣ್ಮರೆಯಾಗುತ್ತಿದೆ. ಆಧುನಿಕ ಕಾಲದಲ್ಲಿ ಹೊಸ ಸಂಘಗಳು ಹುಟ್ಟುವುದಿಲ್ಲ ಮತ್ತು ಭರವಸೆಯ ಹೊಸ ಕಲಾವಿದರು ಉದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಕ್ಷಗಾನ ತಾಳಮದ್ದಳೆಗಳು ಶುದ್ಧಾಭಿರುಚಿಯ ಶ್ರದ್ಧೆಯ ಪ್ರೇಕ್ಷಕರನ್ನು ಬಯಸುತ್ತಿದೆ. ಇದು ವರ್ತಮಾನದ ತಲ್ಲಣ ಮತ್ತು ಕಾಡುವ ಸಮಸ್ಯೆ ಎಂದು “ಕಣಿಪುರ ಡಿಜಿಟಲ್ ಮೀಡಿಯ” ಸಂಪಾದಕ, ಕಲಾಚಿಂತಕ ಎಂ.ನಾ. ಚಂಬಲ್ತಿಮಾರ್ ಕುಂಬಳೆ ನುಡಿದರು.

ಉಡುಪಿ ತಾಲೂಕಿನ ಕಾಪು ಬಳಿಯ ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಡಿ.23ರಿಂದ ಆರಂಭಗೊಂಡ 4ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ತಾಳಮದ್ದಳೆ ಬೌದ್ಧಿಕ ತೂಕದ ಜಿಜ್ಞಾಸು ಪ್ರೇಕ್ಷಕರನ್ನು ಸೃಜಿಸುತ್ತದೆ. ಪ್ರೇಕ್ಷಕರಲ್ಲದು ನಾಗರಿಕ ಮೌಲ್ಯದ, ಶುದ್ಧ ಚಾರಿತ್ರ್ಯ ಮೂಡಿಸುತ್ತದೆ. ಆದರೆ ವರ್ತಮಾನದಲ್ಲಿ ತಾಳಮದ್ದಳೆಯಂಥ ಕನ್ನಡದ ಮೌಲಿಕ ಕಲೆಗೆ ಪ್ರೇಕ್ಷಕರು ಕೊರತೆಯಾಗುತ್ತಿದೆ. ಇದು ತಾಳಮದ್ದಳೆಯೆಂಬ ಕಲೆಯದ್ದೋ, ಕಲಾವಿದರದ್ದೋ ಕೊರತೆಯಲ್ಲ. ಆಧುನಿಕ ದಿನಗಳ ನಾಗರಿಕ ಮನಸ್ಸಿನ ಸಾಂಸ್ಕೃತಿಕ ಅಭಿರುಚಿಯ ಪಲ್ಲಟವೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಸಚ್ಚಾರಿತ್ರ್ಯದ , ಸಾಂಸ್ಕೃತಿಕ ಮಹತ್ವದ ಅರಿವು, ಅಭಿರುಚಿ ಮೂಡಿಸುವ ಕೆಲಸ ನಡೆಯಬೇಕೆಂದು ಎಂದು ಅವರು ಕರೆ ನೀಡಿದರು.
ಸಪ್ತಾಹವನ್ನು ದೀಪ ಪ್ರಜ್ವಲನಗೊಳಿಸಿದ
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ
ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಯಕ್ಷಗಾನ ತಾಳಮದ್ದಳೆಯು ಬುದ್ಧಿ ಮತ್ತು ಜ್ಞಾನ ಪ್ರಚೋದಕ ಕಲೆ. ಶ್ರೀ ಮಠವು ದೇವತಾರಾಧನೆಗಷ್ಟೇ ಸೀಮಿತವಾಗದೆ ಕಲಾ ಪೋಷಣೆಯನ್ನು ಮಾಡುತ್ತದೆ. ಕಲಾರಾಧನೆಯೂ ದೇವತಾರಾಧನೆಯಷ್ಟೇ ಪ್ರಮುಖವಾದುದು. ಕಲೆ ಮನುಷ್ಯರನ್ನು ಸಜ್ಜನರನ್ನಾಗಿ ಮಾಧವನನ್ನಾಗಿ ರೂಪಿಸುತ್ತದೆ ಎಂದು ಅವರು ಅಭಿಪ್ರಾ ಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ವಹಿಸಿದ್ದರು.
ಯಕ್ಷಗಾನ ಕಲಾ ಪೋಷಕರಾದ ಗಣೇಶ್ ಕುಮಾರ್ ಮುಂಬೈ, ಬಿ ಎಂ ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ ಶುಭಾಶಂಸನೆ ನಡೆಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು,
ಶ್ರೀಧರ ಜೆ.ಆಚಾರ್ಯ ಕಟಪಾಡಿ
ಗಣೇಶ ಆಚಾರ್ಯ
ಕೆಮ್ಮಣ್ಣು,
ಉಮೇಶ್ ಸಾಂತೂರು,ರತ್ನಾಕರ ಶೆಟ್ಟಿ, ಸಾಂತೂರು,ಮನೋಹರ್ ಕುಂದರ್ ಎರ್ಮಾಳ್,ಚಂದ್ರಶೇಖರ ಕೊಡಿಪಾಡಿ, ಜಮಾಲುದ್ದೀನ್ ಕಾಪು, ಹರೀಶ್ ಆಚಾರ್ಯ ಕಾಂಜರ ಕಟ್ಟೆ,ಯೋಗೀಶ್ ಆಚಾರ್ಯ ಕೊಯಂಬತ್ತೂರು, ಬಂಬ್ರಾಣ ಯಜ್ಞೇಶ ಆಚಾರ್ಯ, ದಯಾನಂದ ಕೆಳಾರ್ಕಳಬೆಟ್ಟು,ರತ್ನಾಕರ ಆಚಾರ್ಯ ಪಡುಕುತ್ಯಾರು,ಲೋಲಾಕ್ಷ ಶರ್ಮ ಪಡುಕುತ್ಯಾರು, ಕೇಶವ ಶರ್ಮ ಪಡುಕುತ್ಯಾರು, ವಿಕಾಸ್ ಶರ್ಮ ಪಡುಕುತ್ಯಾರು, ಮುಂತಾದವರು ಉಪಸ್ಥಿತರಿದ್ದರು.
ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.
ಸಂಚಾಲಕರಾದ ಜಿ ಟಿ ಆಚಾರ್ಯ ಮುಂಬೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಜನಾರ್ಧನ ಆಚಾರ್ಯ ಕನ್ಯಾನ ವಂದಿಸಿದರು. ಬಳಿಕ “ಅಂಗದ ಸಂಧಾನ ” ಎಂಬ ತಾಳಮದ್ದಲೆ ಪ್ರಸಂಗ ನಡೆಯಿತು.
ಮುಮ್ಮೇಳದಲ್ಲಿ
ಪ್ರಸಿದ್ದ ಕಲಾವಿದರಾದ ಶ್ರೀ ರಾಧಾಕೃಷ್ಣ ಕಲ್ಚಾರ್, , ಶ್ರೀ ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ, ಶ್ರೀ ರಂಗನಾಥ ಭಟ್
ಹಿಮ್ಮೇಳದಲ್ಲಿ ಶ್ರೀ ಕೆ.ಜೆ ಗಣೇಶ್, ಶ್ರೀ ಕೆ.ಜೆ ಸುದೀಂದ್ರ, ಶ್ರೀ ಕೆ.ಜೆ ಕೃಷ್ಣ ಭಾಗವಹಿಸಿದರು.










