ವಿದೇಶಿ ಬೇಡ-ಸ್ವದೇಶಿಯೇ ಬೇಕು.ಪೇಟೆಯದ್ದು ಬೇಡ-ಊರಿನದ್ದೇ ಸಾಕು.ಜೈವ ಕೃಷಿಯದ್ದು ಒಳ್ಳೆಯದು-ರಾಸಾಯನಿಕದ್ದು ಬೇಡವೇ ಬೇಡ…ಹೀಗೆ ಹಲವಾರು ಬೇಕು ಬೇಡಗಳ ನಡುವೆ ದಕ್ಷಿಣ ಅಮೇರಿಕಾ ಮೂಲದ ಟೊಮ್ಯಾಟೊ ಇಂದು ನಮ್ಮನ್ನು ಆಳುತ್ತಿದೆ.!
ಬೇಕಿದೆ ಬೀಂಪುಳಿ,ಹುಣಸೆ ಹುಳಿ,ಪುನರ್ಪುಳಿ
ಕೆಲವೊಂದು ಸಂಗತಿಗಳೇ ಹಾಗೆ.ಅಭ್ಯಾಸವಾದರೆ ಅದು ಹವ್ಯಾಸವಾಗುತ್ತದೆ.ನಂತರ ಅದುವೇ ಚಟವಾಗಿ ಬದಲಾಗುತ್ತದೆ.ಮನುಷ್ಯನು ಬಳಸುವ ಉಪ್ಪು,ಸಕ್ಕರೆ,ಚಾ,ಕೋಫಿ,
ಚಾಕಲೇಟ್,ಪಾನ್ ಮಸಾಲ,ಮದ್ಯ ಎಲ್ಲವೂ ತನಗೆ ಬೇಕಾದಾಗ ಲಭ್ಯವಾಗಲೇಬೇಕು.ಹಾಗೆ ಲಭ್ಯವಾಗಲು ಪೂರಕ ವಾತಾವರಣವೂ ಸೃಷ್ಟಿಯಾಗಿರುವಂತಹ ಮುಂದುವರಿದ ಕಾಲವಿದು.ಒಂದು ವೇಳೆ ಸಿಗದಿದ್ದರೋ,ಎಲ್ಲೆ ಮೀರಿ ವರ್ತಿಸಲೂ ಮಾನವ ಹಿಂಜರಿಯಲಾರ.
ಅಂದು ನಾನು ತರಕಾರಿ ಖರೀದಿಸುತ್ತಿದ್ದೆ.ಟೊಮ್ಯಾಟೊ ಖರೀದಿಸುವುದನ್ನು ನಿಲ್ಲಿಸಿದ್ದೇನೆ ಎನ್ನಲು ಅಲ್ಲಿದ್ದವರು ನಕ್ಕು ಬಿಟ್ಟರು.ಟೊಮ್ಯಾಟೊ ಸಾಸ್ ಇರಲು ಟೊಮ್ಯಾಟೊ ಯಾಕಂತೆ?ಎಂದು ಒಬ್ಬರು ಹೇಳಿದರು.ಮತ್ತೊಬ್ಬರು, ಸರ್,ತಾವು ಟೊಮ್ಯಾಟೊ ಸಾರು ಮಾಡಲು ಟೊಮ್ಯಾಟೊ ಕೊಂಡೊಯ್ಯಲೇ ಬೇಕಲ್ಲವೇ?.ಇವತ್ತೇ ತಕೊಳ್ಳಿ.ನಾಳೆ ರೇಟ್ ಇನ್ನಷ್ಟು ಏರಬಹುದು ಎಂದರು.ಅದೇ ಸಮಯಕ್ಕೆ ಪೋನ್ ರಿಂಗಣಿಸಿತು.ಮಗಳಿಗೆ ಟೊಮ್ಯಾಟೊ ಸಾರ್ ಮಾಡಬೇಕಂತೆ.ಕಾಲು ಕೆ.ಜಿ.ಟೊಮ್ಯಾಟೊ ತರಲು ಮರೆಯಬೇಡ ಎಂಬ ವಾಟ್ಸಪ್ ಸಂದೇಶ ತಲುಪಿತ್ತು..!
ಹೌದು,ನಮ್ಮ ಸುತ್ತ ಮುತ್ತಲಿನ ಹಲವು ಕಟ್ಟುಪಾಡುಗಳಿಗೆ ನಾವು ತಲೆಬಾಗಿದ್ದೇವೆ.ಅವುಗಳು ಸರಿಯೋ? ತಪ್ಪೋ? ಅವುಗಳಿಂದ ನಮಗಿರುವ ಪ್ರಯೋಜನಗಳು,ಅವುಗಳಿಂದುಂಟಾಗುವ ದುಷ್ಪರಿಣಾಮಗಳ ಬಗೆಗೋ ನಾವು ಯೋಚಿಸಲಾರೆವು.ಕೆಲವೊಮ್ಮೆ ನಮ್ಮತನಕ್ಕೆ ಜೋತು ಬಿದ್ದು,ನಾವೇ ಹಠಮಾರಿತನವನ್ನು ಪ್ರದರ್ಶಿಸಿ ಉರುಳಿಗೆ ಬೀಳುವುದೂ ಇದೆ.ಕೆಲವೊಮ್ಮೆ ಇತರರ ಒತ್ತಾಯಕ್ಕೆ ಮಣಿದು,ಪರರ ಸಂತೋಷಕ್ಕೆ ನಾವು ಬಲಿಯಾಗುವುದೂ ನಡೆಯುತ್ತದೆ.ಒಟ್ಟಿನಲ್ಲಿ ಅದೇನೋ ಒಲವು,ಅದೇಕೊ ಹಲವು ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕಿ ನಮ್ಮನ್ನು ನಾವು ಆಳದೆ ಪರರ ಕೈಗೊಂಬೆಯಾಗಿ ಜೀವಿಸುತ್ತಿದ್ದೇವೆ.
ನಾವು ದಿನನಿತ್ಯ ಬಳಸುವ ತರಕಾರಿಗಳು,ಬಿಸ್ಕೆಟ್ ಗಳು,ಚಾಕಲೆಟ್,ಒಣ ಹಣ್ಣುಗಳಲ್ಲಿ ಹೆಚ್ಚಿನವುಗಳೂ ವಿದೇಶಿಯರ ವ್ಯಾಪಾರ ತಂತ್ರಗಳನ್ನು ಅನುಸರಿಸಿಕೊಂಡಿವೆ.ಅಗರ್ಭ ಶ್ರೀಮಂತರ ಬ್ಯುಸಿನೆಸ್ ಐಡಿಯಾಗಳು ರೈತಾಪಿ ವರ್ಗವನ್ನು ನಿದ್ದೆ ಗೆಡಿಸಿದೆ.ಸಾಲದಲ್ಲಿ ಮುಳುಗಿಸಿದೆ.ರಾಸಾಯನಿಕ ಕಂಪೆನಿ ಪ್ರತಿನಿಧಿಗಳು ಹೇಳುವಂತೆ ಕೇಳುವ ಕೈಗೊಂಬೆಗಳಾಗಿದ್ದಾರೆ.ಅದಕ್ಕೆ ಕಾರಣಗಳು ಹಲವಿರಬಹುದು.ಆದರೆ,
ಒಂದಂತೂ ಸತ್ಯ.
ನಮ್ಮೂರಿನಲ್ಲಿ ಬೆಳೆದ,ನಮ್ಮೂರಿನಲ್ಲಿ ಪ್ಯಾಕ್ ಮಾಡಿದ ಐಟಮ್ ಗಳಿಗೆ ಬೇಡಿಕೆ ಕಡಿಮೆ.ನಮಗೆಲ್ಲಾ ಬ್ರ್ಯಾಂಡೆಡ್ ಆಗಬೇಕು.ವಾಚ್- ಚಿನ್ನಾಭರಣಗಳು,ಬಟ್ಟೆ ಬರೆಗಳು ಅಷ್ಟೇ ಏಕೆ ಸೋಪ್ ಚಪ್ಪಲಿಗಳಿಗೂ ಹೆಚ್ಚು ಮೊತ್ತ ನೀಡಿ ಪಡೆದುಕೊಂಡರೆ ನಮಗೆ ತುಂಬಾ ಖುಷಿ.ಇನ್ನು ವಾಹನಗಳಲ್ಲಿ ಹೇಳಬೇಕೆಂದಿಲ್ಲ.ಸ್ಕೂಟಿ,ಬೈಕ್,ಕಾರುಗಳ ತಂತ್ರಜ್ಞಾನವೆಲ್ಲವೂ ನಮ್ಮದ್ದು ಎಂದು ಎದೆ ತಟ್ಟಿ ಹೇಳಲು ಒಂದೂ ಇಲ್ಲವಲ್ಲಾ.! ನಮ್ಮದು ಎಲ್ಲವೂ ಟೈ ಅಪ್.!
ಆದ್ದರಿಂದಲೇ,ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಕತೆ ಕೇಳ ಬೇಕೆಂದಿನಿಸುತ್ತದೆ.ಯಾರು ಬಳಸುತ್ತಿದ್ದರು ಟೊಮ್ಯಾಟೊ.? ಯಾರು ಪರ್ಚೇಸ್ ಮಾಡುತ್ತಿದ್ದರು ಸಾಸ್.?
ಯಾರು ಕುಡಿಯುತ್ತಿದ್ದರು ಸೂಪ್..? ಮಿಶ್ರಾಹಾರಿಗಳಿಗೆ ಅದ್ಯಾವುದೋ ಮಾಮಿ ಸಮ್ಮಾನಕ್ಕೆ ಹೋದರೆ ಊರ ಕೋಳಿ ಸುಕ್ಕ ಸಿಗುತ್ತಿತ್ತು. ಸಸ್ಯಾಹಾರಿಗಳಂತೂ ಹಾಲಿನ ಹುಡಿಯನ್ನು ನೋಡಿಯೇ ಇರಲಾರರು.ಹಾಗೆಂದು ಇದೀಗ ಬೀಂಪುಳಿ ಧಾರಾಳವಾಗಿ ಉಪಯೋಗವಾಗದು.ಹುಣಸೆ ಹುಳಿಯ ರೇಟ್ ಹೇಳಲಾಗದು.
ಪುನರ್ಪುಳಿಯಂತೂ ಎಲ್ಲಾ ಕಡೆ ಇರದು.ಉಂಡೆ ಪುಳಿಯಂತೂ ಕಾಣಲೇ ಸಿಗದು.ಆದ್ದರಿಂದಲೇ ನಮ್ಮನ್ನು ಟೊಮ್ಯಾಟೊ ಕಟ್ಟಿ ಹಾಕಿದೆ.ನಮ್ಮನ್ನು ಸಾಸ್ ಬಂಧನದಲ್ಲಿರಿಸಿದೆ.ಅವುಗಳಿಲ್ಲದಿದ್ದರೆ ನಮ್ಮ ಅಡುಗೆ ಮನೆ ಅದೇನೋ ಕಳೆದುಕೊಂಡಂತೆ.!ದಕ್ಷಿಣ ಅಮೇರಿಕಾದ ಹಣ್ಣೊಂದು ಈ ರೀತಿಯಲ್ಲಿ ನಮ್ಮನ್ನು ಆಳುತ್ತಿರಲು,ತಾಯ್ನಾಡಿನ,ಅದೆಷ್ಟೋ ಪೋಷಕಾಂಶಗಳ ಆಗರವಾಗಿರುವ
ಹುಳಿಹಣ್ಣು,ಕಾಯಿಗಳು ಹೇಳ ಹೆಸರಿಲ್ಲದೆ ಮೂಲೆಗುಂಪಾಗಿವೆ.
ಸದ್ಯಕ್ಕೆ ಟೊಮ್ಯಾಟೊ ಕಿ.ಲೋ ಒಂದಕ್ಕೆ ನೂರಿಪ್ಪತ್ತು ರೂಪಾಯಿಯಾದರೂ ಯಾರ ಮನೆಯಲ್ಲಿ ಟೊಮ್ಯಾಟೊ ಹಾಕದೆ ಪದಾರ್ಥ ಮಾಡುತ್ತಾರೆ ಹೇಳಿನೋಡೋಣ..?!
ನಮಗಾಗಿ…ನಮ್ಮ ನಾಳೆಗಾಗಿ…
- -ನಮಗೆ ಬೇಕಾದ್ದನ್ನು ನಾವೇ,ನಮ್ಮೂರಲ್ಲೇ ಉತ್ಪಾದಿಸ ಬೇಕಾದ ತುರ್ತು ಅಗತ್ಯವಿದೆ.ಅದಕ್ಕಾಗಿ, ರಾಸಾಯನಿಕ ಮತ್ತು ಕೀಟನಾಶಕಗಳ ಸಿಂಪಡಣೆಯಿಂದ ಹದಗೆಟ್ಟಿರುವ ಮಣ್ಣಿನ ಆರೋಗ್ಯವನ್ನು ರಕ್ಷಿಸಬೇಕಿದೆ.
- -ಸಾಮಾನ್ಯ ರೈತರು ನೇರ ಮಾರುಕಟ್ಟೆಯತ್ತ ಹೊರಡಬೇಕಿದೆ.ಈಗಾಗಲೇ ಮಾರುಕಟ್ಟೆಯನ್ನು ಹಿಡಿತದಲ್ಲಿರಿಸಿರುವ ಸೂಪರ್ ಬಝಾರ್ ಗಳನ್ನು,ಓನ್ಲೈನ್ ತಂತ್ರಜ್ಞಾನಗಳನ್ನು ಬದಿಗಿರಿಸಬೇಕಿದೆ.
- -ಗ್ರಾಮೀಣ ಪ್ರದೇಶಗಳಲ್ಲಿ ಧಾರಾಳವಾಗಿ ಸಿಗುವ ಸೊಪ್ಪು ತರಕಾರಿಗಳನ್ನು ದಿನ ನಿತ್ಯ ಬಳಸುವಲ್ಲಿ ನಮ್ಮ ಅಡುಗೆ ಕೋಣೆ ಸಿದ್ದವಾಗಬೇಕಿದೆ.ಈ ಬಗೆಗಿನ ಹಿರಿಯರ ಮಾಹಿತಿಗಳನ್ನು ಕಿರಿಯರಲ್ಲಿ ಹಂಚಿಕೊಳ್ಳಬೇಕಾದ್ದು ಅತೀ ಅಗತ್ಯವಾಗಿದೆ.
- -ಮಕ್ಕಳಿಗೆ ಕೃಷಿಯ ಬಗೆಗಿನ ಆಸಕ್ತಿ ಮೂಡಿಸಲು ಶತ ಪ್ರಯತ್ನ ಬೇಕಿದೆ.ಕೃಷಿಯಲ್ಲಿ ನಿರತ ಮಕ್ಕಳಿಗೆ ಓದಿನಲ್ಲಿ ಗ್ರೇಸ್ ಅಂಕಗಳನ್ನು ನೀಡುವ ಬಗ್ಗೆಯೂ ಆಳುವವರು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕಿದೆ.
- -ಹಿರಿಯರು ಅನುಸರಿಸುತ್ತಿದ್ದ ಹಲವು ಅಡುಗೆ ತಂತ್ರಗಳು ಕಣ್ಮರೆಯಾಗಿವೆ.ಅವುಗಳನ್ನು ಅಡುಗೆ ಕೋಣೆಯ ಸಂಸ್ಕೃತಿಗೆ ಮರಳಿ ತರಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.
- -ಹಿತ್ತಿಲ ಗಿಡದ ಮದ್ದನ್ನು ಯಾವಾಗ?ಹೇಗೆ?ಯಾಕೆ?ಬಳಸಬೇಕೆಂಬುದನ್ನು ಕಿರಿಯ ಮನಸುಗಳಿಗೆ ತಿಳಿಸಿಕೊಡಲೇ ಬೇಕಾಗಿದೆ.ಅದಕ್ಕಾಗಿ ಊರಿನ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳಲೇ ಬೇಕಾಗಿದೆ.
- -ಕೀಟ ನಾಶಕಗಳ,ರಾಸಾಯನಿಕಗಳ ಬಳಕೆಯನ್ನು ದುಡ್ಡಿನ ಕಂಪೆನಿಗಳು ನಮ್ಮ ಮೇಲೆ ನಿರ್ಬಂಧಿಸಿವೆ.ಇವುಗಳನ್ನು ದೂರ ಮಾಡದೆ ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿ ಇಲ್ಲವೆಂಬ ಸತ್ಯವನ್ನು ತಿಳಿದುಕೊಂಡು ಜೀವನರೀತಿಯನ್ನು ಬದಲಾಯಿಸಿಕೊಳ್ಳಬೇಕಿದೆ.