ಪೆರ್ಲ ಪೇಟೆಯ ಹೃದಯ ಭಾಗದ ಅಂಗಡಿ ಸಮುಚ್ಛಯ ಶನಿವಾರ ಮಧ್ಯರಾತ್ರಿಯ ಬಳಿಕ ಅಗ್ನಿ ಅನಾಹುತಕ್ಕೀಡಾಗಿ 9 ವ್ಯಾಪಾರ ಸಂಸ್ಥೆಗಳು ಸಂಪೂರ್ಣ ನಾಶಗೊಂಡಿವೆ. ಪೆರ್ಲ ಪೇಟೆಯ ಜಂಕ್ಷನ್ ನಲ್ಲೇ ಇರುವ ಬಿ.ಗೋಪಿನಾಥ ಪೈ ಎಂಬವರ ಕಟ್ಟಡ ಅಗ್ನಿ ಅನಾಹುತಕ್ಕೀಡಾಗಿ ಈ ದುರಂತ ಸಂಭವಿಸಿದೆ.
ಪೆರ್ಲ ಸ.ನಾ. ಹೈಸ್ಕೂಲಿನ ದ್ವಾರದ ಬಳಿಯಲ್ಲೇ ಇರುವ ಈ ಕಟ್ಟಡದಲ್ಲಿ ನಿನ್ನೆ ಮಧ್ಯರಾತ್ರಿಯ ಬಳಿಕ ಅಗ್ನಿ ಕಾಣಿಸಿಕೊಂಡಿದ್ದು, ಆದಿತ್ಯವಾರ ಮುಂಜಾನೆಯ ವರೆಗೆ ಅಂಗಡಿಗಳು ಹೊತ್ತಿ ಉರಿದುವು. ದುರ್ಘಟನೆಯಲ್ಲಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಗೌತಮ್ ಕೋಲ್ಡ್ ಹೌಸ್, ಗೋಪಿಕಾ ಟೆಕ್ಸ್ ಟೈಲ್ಸ್, ಫ್ಯಾನ್ಸಿ ಅಂಗಡಿ, ಆಟೋಮೋಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ, ಎಕೆಎಂ ವೆಜಿಟೇಬಲ್ಸ್ ಸೇರಿದಂತೆ 9 ವ್ಯಾಪಾರ ಸಂಸ್ಥೆಗಳು ಹೊತ್ತಿ ಉರಿದು ನಾಶವಾಗಿದೆ.
ಉಪ್ಪಳ, ಕಾಸರಗೋಡು, ಕುತ್ತಿಕೋಲು, ಕಾಞಂಗಾಡು ಮೊದಲಾದ ದೂರದ ಪ್ರದೇಶದ ಅಗ್ನಿಶಾಮಕ ದಳ ಘಟಕದಿಂದ 6 ಅಗ್ನಿಶಾಮಕಗಳು ಬಂದು ಬೆಂಕಿ ನಂದಿಸಿದರೂ ಅಂಗಡಿಗಳು ಪೂರ್ಣ ಹೊತ್ತಿ ಉರಿದಿವೆ. ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಎಣ್ಮಕಜೆ, ಬದಿಯಡ್ಕ, ಬೆಳ್ಳೂರು, ಏತಡ್ಕ, ದೇಲಂಪಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅಗ್ನಿದುರಂತಗಳು ಸಂಭವಿಸಿದರೆ ಸಕಾಲದಲ್ಲಿ ಧಾವಿಸಿ ಅಗ್ನಿ ಶಮನಗೊಳಿಸಲು ಈ ಪರಿಸರದಲ್ಲಿ ಎಲ್ಲಿಯೂ ಅಗ್ನಿಶಮನ ಘಟಕಗಳಿಲ್ಲ. ಆದ್ದರಿಂದ ದೂರದ ಊರಿಂದ ಅಗ್ನಿಶಾಮಕ ವಾಹನ ಧಾವಿಸಿ ಬರುವಷ್ಟರಲ್ಲಿ ದುರಂತ ಸಂಭವಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಬದಿಯಡ್ಕ ದಂಥ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಘಟಕ ಅಸ್ತಿತ್ವಕ್ಕೆ ಬರಬೇಕಾದ ಅಗತ್ಯ ಇದೆಯೆಂದು ನಾಗರಿಕರು ಬಯಸಿದ್ದಾರೆ.