ಯಕ್ಷಗಾನ ವೇಷಕ್ಕೆ ಕನ್ನಡ ಅಂಕೆಯ ನಾಮತೊಡಿಸಿದ ಪ್ರತಿಭೆ ಸತೀಶ್ ನೀರ್ಕೆರೆ

ಪಾತ್ರದ ಸಂಖ್ಯೆಯಂತೆಯೇ ಬೆಳೆಯುವ ದಿನಕ್ಕೊಂದು ನಾಮ : ಭಾಷಾ ಸಂಖ್ಯೆಯನ್ನು ವೇಷಕ್ಕೆ ತೊಡಿಸಿದ ತರುಣ ಕಲಾವಿದ

by Narayan Chambaltimar
  • ಯಕ್ಷಗಾನ ವೇಷಕ್ಕೆ ಕನ್ನಡ ಅಂಕೆಯ ನಾಮತೊಡಿಸಿದ ಪ್ರತಿಭೆ ಸತೀಶ್ ನೀರ್ಕೆರೆ
  • ಪಾತ್ರದ ಸಂಖ್ಯೆಯಂತೆಯೇ ಬೆಳೆಯುವ ದಿನಕ್ಕೊಂದು ನಾಮ : ಭಾಷಾ ಸಂಖ್ಯೆಯನ್ನು ವೇಷಕ್ಕೆ ತೊಡಿಸಿದ ತರುಣ ಕಲಾವಿದ

ತೆಂಕುತಿಟ್ಟು ಯಕ್ಷಗಾನದ ಯುವಪ್ರತಿಭೆ ಸತೀಶ್ ನೀರ್ಕೆರೆ ತನ್ನ ವೇಷದ ಮುಖವರ್ಣಿಕೆಯ ನಾಮ ವೈವಿಧ್ಯಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ತನಗೆ ಸಿಕ್ಕ ಪಾತ್ರಗಳಲ್ಲಿ ಸೃಜನಶೀಲತೆಯೊಂದಿಗೆ ಪ್ರತಿಭಾ ಪ್ರದರ್ಶನಗೈದು ಗಮನ ಸೆಳೆಯುವ ಈ ಯುವ ಕಲಾವಿದ ಇದೀಗ ಕನ್ನಡದ ಅಂಕೆಗಳನ್ನೇ ವೇಷದ ನಾಮಗಳನ್ನಾಗಿಸುವ ಮೂಲಕ ಅಪೂರ್ವ ಪ್ರತಿಭಾ ದರ್ಶನದಿಂದ ಗಮನ ಸೆಳೆದಿದ್ದಾರೆ.

ಪ್ರಸ್ತುತ ಹನುಮಗಿರಿ ಮೇಳದ ಕಲಾವಿದರಾದ ಸತೀಶ್ ಈ ಬಾರಿಯ ಜನಪ್ರಿಯ ಪ್ರಸಂಗ “ಸಾಕೇತ ಸಾಮ್ರಾಜ್ಞಿ”ಯಲ್ಲಿ ಪಾತ್ರ ಚಿಕ್ಕದಾದರೂ ತನ್ನ ಸೃಜನತೆಯಿಂದ ಜನಗಮನ ಸೆಳೆವ ರೀತಿಯೇ ಭಿನ್ನ

ಸಾಕೇತ ಸಾಮ್ರಾಜ್ಞಿ ಪ್ರಸಂಗದಲ್ಲವರಿಗೆ ಶಂಭರಾಸುನ ಬಲ ಭದ್ರಬಲ ಎಂಬ ಪಾತ್ರ. ಅದೊಂದು ಯುದ್ಧಕ್ಕೆ ಸೀಮಿತ ರಕ್ಕಸ ಬಲ. ಆದರೆ ಈ ಪಾತ್ರವನ್ನು ಅಚ್ಚುಕಟ್ಟುತನದಿಂದ ಪೋಷಿಸುವ ಅವರು ಈ ಪಾತ್ರದ ಮುಖವರ್ಣಿಕೆಯಲ್ಲಿ ತೋರಿಸುತ್ತಿರುವ ಸೃಜನತೆಯಿಂದ ಈಗ ಜನಾಕರ್ಷಿಸುತ್ತಿದ್ದಾರೆ.

ಅಂಕೆಗಳೇ ನಾಮವಾಗುವ ವೈಶಿಷ್ಟ್ಯ..

ತನ್ನ ಪಾತ್ರಕ್ಕೆ ದಿನಕ್ಕೊಂದು ವೈಶಿಷ್ಟ್ಯದ ಮುಖವರ್ಣಿಕೆ ಬರೆಯುವುದವರ ಹವ್ಯಾಸ. ಇದು ಈ ಹಿಂದೆ ಧರ್ಮಸ್ಥಳ ಮೇಳದ ಕಲಾವಿದನಾಗಿದ್ದಾಗ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ಪಾತ್ರದಲ್ಲವರು ಪ್ರಯೋಗಿಸಿದ ವೈಶಿಷ್ಟ್ಯ. ಪ್ರಸ್ತುತ ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿಯಲ್ಲಿ ತನಗೊದಗಿದ ಭದ್ರಬಲ ಪಾತ್ರದ ಸಂಖ್ಯೆಯನ್ನೇ ಕನ್ನಡ ಅಂಕೆಯಲ್ಲಿ ನಾಮವನ್ನಾಗಿಸಿದ್ದು ಅವರ ಪ್ರತಿಭಾ ಚಮತ್ಕಾರ.
ಭದ್ರಬಲ ಪಾತ್ರ ನಿರ್ವಹಿಸುವ ಅವಕಾಶ 17ನೇ ಬಾರಿ ಒದಗಿದಾಗ ಮುಖದ ನಾಮವನ್ನು ಕನ್ನಡ ಅಂಕೆಯಲ್ಲಿ 17 ಎಂದೇ ಬರೆದು ಆರಂಭ. ಆ ಬಳಿಕ 18, 19, 20 ಎಂದು ಕನ್ನಡಂಕೆಯಲ್ಲೇ ಬರೆಯಲಾರಂಭಿಸಿದ ಇವರು 25ರ ತನಕ ಕನ್ನಡದಲ್ಲೇ ಬರೆದು ಮತ್ತೆ ಸಂಸ್ಕೃತ ಅಂಕೆಯಲ್ಲಿ ವೇಷದ ನಾಮ ಬರೆಯಲು ಉತ್ಸಾಹ ಹೊಂದಿದ್ದಾರೆ.

“ಈ ಥರ ಅಂಕೆಯನ್ನೇ ನಾಮವನ್ನಾಗಿಸುವುದಕ್ಕೆ ಪ್ರತ್ಯೇಕ ಉದ್ದೇಶವೇನಿಲ್ಲ. ದಿನವೂ ವೈವಿಧ್ಯಮಯ ಮುಖವರ್ಣಿಕೆ ಮಾಡುವುದೆಂದರೆ ನನಗೆ ಎಳವೆಯಿಂದಲೇ ಆಸಕ್ತಿ. ಹನುಮಗಿರಿಯಂಥ ಗಜಮೇಳದಲ್ಲಿ ನಾನೂ ಕಾಣಿಸಬೇಕಿದ್ದರೆ ವೈವಿಧ್ಯತೆ ಬೇಕಲ್ಲ? ಹಾಗೆ ಅಂಕೆಯನ್ನೇ ನಾಮವಾಗಿಸಿದೆ. ಅದು ಚಂದ ಕಾಣುತ್ತಿದೆಯೆಂದು ಒಡನಾಡಿ ಕಲಾವಿದರು ಪ್ರಶಂಸಿಸಿದರು. ಇದರಿಂದಲೇ ಸಂಸ್ಕೃತ ಅಂಕೆ ಬರೆಯುವ ಉತ್ಸಾಹ ಮೂಡಿದೆ. ಕನಿಷ್ಟ ಪಕ್ಷ ಸಂಸ್ಕೃತ ಅಂಕೆಯಾದರೂ ಪ್ರಚಾರವಾದೀತಲ್ಲ…?
– ಸತೀಶ್ ನೀರ್ಕೆರೆ
– ಯಕ್ಷಗಾನ ಕಲಾವಿದರು

ಕಳೆದ 16ವರ್ಷಗಳಿಂದ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಕಲಾವಿದನಾಗಿ ದುಡಿಯುತ್ತಿರುವ ಸತೀಶ್ ಮೂಡಬಿದಿರೆ ಬಳಿಯ ನೀರ್ಕೆರೆ ನಿವಾಸಿ. ಕಟೀಲು, ಧರ್ಮಸ್ಥಳ, ಗೆಜ್ಜೆಗಿರಿ -ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ಈ ಹಿಂದೆ ತಿರುಗಾಟ ಮಾಡಿದ ಅವರು ಸ್ತ್ರೀ ವೇಷ, ಪುರುಷ ವೇಷಗಳೆರಡನ್ನೂ ನಿರ್ವಹಿಸುವ ಕಲಾವಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00