ಗಡಿನಾಡ ದೇವಾಲಯಗಳ ಸುಗಮ ಪರಿಪಾಲನೆ, ವ್ಯವಸ್ಥಿತ ನಿರ್ವಹಣೆಗಳನ್ನು ದೇವಸ್ವಂ ಗಮನಕ್ಕೆ ತರಬೇಕು.. ಮಲಬಾರ್ ದೇವಸ್ವಂ ಮಂಡಳಿಗೆ ನೂತನ ಸದಸ್ಯರಾಗಿ ನಿಯುಕ್ತರಾದ ಶಂಕರ ಆದೂರು ಪ್ರತಿಕ್ರಿಯೆ

by Narayan Chambaltimar
  • ಗಡಿನಾಡ ದೇವಾಲಯಗಳ ಸುಗಮ ಪರಿಪಾಲನೆ, ವ್ಯವಸ್ಥಿತ ನಿರ್ವಹಣೆಗಳನ್ನು ದೇವಸ್ವಂ ಗಮನಕ್ಕೆ ತರಬೇಕು..
  • ಮಲಬಾರ್ ದೇವಸ್ವಂ ಮಂಡಳಿಗೆ ನೂತನ ಸದಸ್ಯರಾಗಿ ನಿಯುಕ್ತರಾದ ಶಂಕರ ಆದೂರು ಪ್ರತಿಕ್ರಿಯೆ

ಕಾಸರಗೋಡು , ಮಂಜೇಶ್ವರ ತಾಲೂಕಿನ ದೇವಾಲಯಗಳ ಬೇಡಿಕೆ, ಸಮಸ್ಯೆಗಳ ಕುರಿತು ದೇವಸ್ವಂ ಮಂಡಳಿಗೆ ಮಾಹಿತಿಗಳ ಕೊರತೆ ಇದೆ. ತುಳು – ಕನ್ನಡ ವಲಯದ ದೇವಳದ ಸಮಸ್ಯೆಗಳನ್ನು ದೇವಸ್ವಂ ಗಮನಕ್ಕೆ ತಂದು ಅದಕ್ಕೆ ಪರಿಹಾರ ಒದಗಿಸುವ ಕೆಲಸಗಳಾಗಬೇಕು. ಈ ದೃಷ್ಟಿಯಲ್ಲಿ ಎಲ್ಲಾ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸಂಯುಕ್ತ ಸಮಾಲೋಚನಾ ಸಭೆ ಕಾಸರಗೋಡು ತಾಲೂಕಿನಲ್ಲಿ ನಡೆಯಬೇಕಿದೆ ಎಂದು ಮಲಬಾರ್ ದೇವಸ್ವಂ ಮಂಡಳಿಗೆ ನೂತನ ಸದಸ್ಯರಾಗಿ ನಿಯುಕ್ತರಾದ ಸಾಮಾಜಿಕ ಕಾರ್ಯಕರ್ತ ಶಂಕರ ಆದೂರು ನುಡಿದರು.

 

ಮಲಬಾರ್ ದೇವಸ್ವಂ ಮಂಡಳಿ ಸದಸ್ಯರಾಗಿ ನಿಯುಕ್ತರಾದ ಹಿನ್ನೆಲೆಯಲ್ಲಿ Kanipura digital media ಜತೆ ಮಾತನಾಡಿದ ಅವರು ಮಲಬಾರ್ ದೇವಸ್ವಂ ಮಂಡಳಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಅದರಡಿಯಲ್ಲಿ 2,400ಕ್ಕೂ ಅಧಿಕ ದೇವಾಲಯಗಳಿವೆ. ಐದು ವಿಭಾಗಗಳ ಅಡಿಯಲ್ಲಿದು ನಿಯಂತ್ರಿಸಲ್ಪಟ್ಟರೂ ನಮ್ಮ ಕಾಸರಗೋಡು, ಮಂಜೇಶ್ವರ ತಾಲೂಕು ವ್ಯಾಪ್ತಿಯ ದೇವಾಲಯಗಳಿಗೆ ಸಾಕಷ್ಟು ಪರಿಗಣನೆ ಸಿಕ್ಕಿಲ್ಲ. ಆದ್ದರಿಂದ ಕ್ಷೇತ್ರಗಳ ಸುಗಮ ಪರಿಪಾಲನೆ, ಸುವ್ಯವಸ್ಥಿತ ನಿರ್ವಹಣೆಗಳು ನಡೆಯಬೇಕು. ಈ ದಿಶೆಯಲ್ಲಿ ನ್ಯೂನತೆಗಳಿದ್ದರೆ ದೇವಸ್ವಂ ಗಮನಕ್ಕೆ ತಂದು ಪರಿಹಾರ ಒದಗಿಸುವ ಕೆಲಸಗಳಿಗೆ ಆದ್ಯತೆ ನೀಡಲಾಗುವುದೆಂದು ಅವರು ತಿಳಿಸಿದರು.

ದೇವಸ್ವಂ ಮಂಡಳಿಯ ಬಗ್ಗೆ ನಮ್ಮ ನಾಡಲ್ಲಿ ಭಕ್ತ ಜನರಲ್ಲಿ ತಪ್ಪು ಕಲ್ಪನೆಗಳನ್ನು ಬಿಂಬಿಸಲಾಗಿದೆ. ಮಂಡಳಿ ಮತ್ತದರ ಸದಸ್ಯರ ಕರ್ತವ್ಯಗಳ ಕುರಿತೂ ಮಾಹಿತಿ ಮತ್ತು ಅರಿವಿನ ಕೊರತೆ ಇದೆ. ಇದು ನೀಗಬೇಕಾಗಿದೆ ಮತ್ತು ದೇವಾಲಯಗಳ ಪರಿಪಾಲನೆ ಅದರ ಆಚಾರನುಷ್ಠಾನಕ್ಕೆ ಧಕ್ಕೆ ಬಾರದೇ ನಡೆಯಬೇಕು ಎಂದರು.

ದೇವಸ್ವಂ ಸದಸ್ಯರಿಗೆ ಆಯಾ ಪ್ರದೇಶದ ದೇವಾಲಯಗಳ ಸುವ್ಯವಸ್ಥಿತ ಕಾರ್ಯನಿರ್ವಹಣೆ ಕುರಿತು ಗಮನ ಹರಿಸುವ ಜವಾಬ್ದಾರಿಗಳಿವೆ. ದೇವಾಲಯದ ವಾರ್ಷಿಕ ಮುಂಗಡ ಪತ್ರ ಸಹಿತ ಅಲ್ಲಿ ನಡೆಯುವ ಕಾಮಗಾರಿಗಳ ನಿರ್ವಹಣೆಯ ಮೇಲ್ನೋಟ ಮತ್ತು ನೇಮಕಾತಿ, ಆರ್ಥಿಕ ವ್ಯವಹಾರ ಸಹಿತ ಕಾರ್ಯ ನಿರ್ವಹಣೆಗಳ ಬಗ್ಗೆ ದೇವಸ್ವಂ ಮಂಡಳಿಯನ್ನು ಪ್ರತಿನಿಧೀಕರಿಸುವ ಜವಾಬ್ದಾರಿಗಳಿವೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಎನ್ನುವುದು ಜವಾಬ್ದಾರಿಯುತ, ಗೌರವದ ಕೆಲಸ. ಅದನ್ನು ಶ್ರದ್ಧಾ ಭಕ್ತಿಯಿಂದ ನಿರ್ವಹಿಸುವುದಾಗಿ ಶಂಕರ ಆದೂರು ನುಡಿದರು.

 

 

 

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00