- ಸ್ಟಾರ್ ಕ್ರಿಕೆಟರ್ ಅಶ್ವಿನ್ ನಿವೃತ್ತಿಗೆ ಅವಮಾನ ಕಾರಣವೇ…?
ಅಂತರಾಷ್ಟ್ರೀಯ ಕ್ರಿಕೆಟಿಗೆ ದಿಢೀರನೆ ವಿದಾಯ ಹೇಳಿದ ಭಾರತದ ಸ್ಟಾರ್ ಕ್ರಿಕೆಟಿಗ, ಜಗದ್ವಿಖ್ಯಾತ ಸ್ಪಿನ್ನರ್ ಆರ್. ಅಶ್ವಿನ್ ಅವರ ನಿವೃತ್ತಿ ನಿರ್ಧಾರಕ್ಕೆ ಬಿಸಿಸಿಐಯ ಅವಮಾನ ಕಾರಣವೇ…?
ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯ ಆಘಾತ ನೀಡಿರುವ ಅಶ್ವಿನ್ ವಿದಾಯದ ಬೆನ್ನಲ್ಲೇ ಅವರು ತಂಡದಲ್ಲಿ ನಿರಂತರ ಅವಮಾನ ಅನುಭವಿಸಿದ್ದರಿಂದಲೇ ಈ ನಿರ್ಧಾರ ಕೈಗೊಂಡರೆಂಬ ಮಾಹಿತಿ ಹೊರಬಂದಿದೆ. ಸ್ವತಃ ಅಶ್ವಿನ್ ಅವರ ತಂದೆಯೇ ಹೀಗೊಂದು ಆರೋಪವನ್ನು ಮುಂದಿಟ್ಟಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ
ಅಶ್ವಿನ್ ನಿವೃತ್ತಿಗೆ ಸಂಬಂಧಿಸಿ ಮಾಧ್ಯಮಗಳೊಂದಿಗೆ ಚೆನ್ನೈಯಲ್ಲಿ ಮಾತನಾಡಿರುವ ರವಿಚಂದ್ರನ್ (ತಂದೆ) ತಮ್ಮ ಮಗನಿಗೆ ಪ್ರತಿಭೆ, ಯೋಗ್ಯತೆ ಇದ್ದರೂ ಭಾರತೀಯ ತಂಡದಲ್ಲಿ ನಿರಂತರ ಅವಗಣಿಸಿ, ಅವಮಾನಿಸಿ, ನೋವುಂಟು ಮಾಡುತ್ತಿದ್ದರೆಂಬ ಆರೋಪವನ್ನು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಲೇ ಅಶ್ವಿನ್ ರಲ್ಲಿ ಸಾಕಷ್ಟು ಕ್ರಿಕೆಟ್ ಬಾಕಿ ಇದ್ದರೂ ಅವರು ಅನಿರೀಕ್ಷಿತ ನಿವೃತ್ತಿ ಪ್ರಕಟಿಸಿರಬಹುದೆಂದು ಅವರು ಹೇಳಿದ್ದಾರೆ. ಆದರೆ ಆರ್. ಅಶ್ವಿನ್ ಯಾವುದೇ ಮಾಧ್ಯಮಗಳಿಗೂ ಪ್ರತಿಕ್ರಿಯೆಗಳನ್ನು ನೀಡದೇ ಮೌನವಾಗಿ ಚೆನ್ನೈಯ ಮನೆ ಸೇರಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದ ಬಳಿಕ ಭಾವನಾತ್ಮಕವಾಗಿ ಅಶ್ವಿನ್ ತನ್ನ ನಿವೃತ್ತಿ ಪ್ರಕಟಿಸಿದ್ದರು. ಈ ವೇಳೆ ಯಾವುದೇ ಹಸ್ತಕ್ಷೇಪ ನಡೆಸದ ಬಿಸಿಸಿಐ ನಿವೃತ್ತಿಗೆ ಮುಕ್ತ ಅವಕಾಶ ನೀಡಿ ಇನ್ನೂ ಹಲವರಿಗೆ ಇದೇ ದಾರಿಯೆಂಬ ಪರೋಕ್ಷ ಸಂದೇಶ ನೀಡಿದೆಯೆಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೇರಳದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ತಂದೆ ಕೂಡಾ ಇಂಥದೇ ಹೇಳಿಕೆಯನ್ನು ಇತ್ತೀಚೆಗೆ ನಿಡಿದ್ದರು.