- ಆನೆ ಮೆರವಣಿಗೆ ನಿಷೇಧಿಸಿದ್ದ ಕೇರಳ ಹೈಕೋರ್ಟು ಆದೇಶಕ್ಕೆ ಸುಪ್ರೀಂ ಕೋರ್ಟು ತಡೆಯಾಜ್ಞೆ
ಕೇರಳದ ದೇವಾಲಯಗಳ ಜಾತ್ರಾದಿ ಉತ್ಸವ ಸಂದರ್ಭಗಳಲ್ಲಿ ಅನುಷ್ಠಾನದಂಗವಾಗಿ ನಡೆಸುವ ಆನೆಗಳ ಮೆರವಣಿಗೆ ನಿಷೇಧಿಸಿದ ಕೇರಳ ಹೈಕೋರ್ಟು ತೀರ್ಪನ್ನು ಸುಪ್ರೀಂಕೋರ್ಟು ತಡೆ ಹಿಡಿದಿದೆ. ಚಾಲ್ತಿಯಲ್ಲಿರುವ ಕಾಯ್ದೆಗಳನ್ನು ಪಾಲಿಸಿ ದೇವಸ್ವಂಗಳಿಗೆ ಆನೆ ಮೆರವಣಿಗೆ ನಡೆಸಬಹುದಾಗಿದೆ ಎಂದು ಪೂರಕವಾದ ಆದೇಶವನ್ನು ಸುಪ್ರೀಂಕೋರ್ಟು ನೀಡಿದೆ.
ದೇವಾಲಯಗಳ ಉತ್ಸವಾದಿ ಜಾತ್ರಾ ಸಂದರ್ಭಗಳಲ್ಲಿ ನಡೆಯುತ್ತಿದ್ದ ಪಾರಂಪರಿಕ ಆನೆ ಮೆರವಣಿಗೆಗಳಿಗೆ ನಿಬಂಧನೆಗಳನ್ನು ಹೇರಿ ನಿಷೇಧಿಸಿದ್ದ ಹೈಕೋರ್ಟು ತೀರ್ಪನ್ನು ಪ್ರಶ್ನಿಸಿ ತಿರುವಂಬಾಡಿ, ಪಾರಮಕಾವ್ ದೇವಸ್ವಂಗಳು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದವು.
ಹೈಕೋರ್ಟು ತೀರ್ಪು ಪ್ರಾಯೋಗಿಕವೆಂದನ್ನಿಸುತ್ತಿಲ್ಲ ಮತ್ತು ಶೂನ್ಯತೆಯಿಂದ ಆದೇಶ ಹೊರಡಿಸುವಂತಿಲ್ಲವೆಂದು ಉಲ್ಲೇಖಿಸಿ ಸುಪ್ರೀಂಕೋರ್ಟು ಜಸ್ಟೀಸ್ ನಾಗರತ್ನ ಹೈಕೋರ್ಟು ಆದೇಶಕ್ಕೆ ತಡೆಯಾಜ್ಞೆ ವಿಧಿಸಿದರು.
ದೇವಾಲಯಗಳ ಆಚಾರ ಪರಂಪರೆ ಕಾಪಾಡುತ್ತಲೇ ಆನೆಗಳ ಸಂರಕ್ಷಣೆಗೂ ಕಾಳಜಿಯಿತ್ತು ಉತ್ಸವಾದಿಗಳನ್ನು ನಡೆಸಬೇಕೆಂದು ತೀರ್ಪಿನಲ್ಲಿ ಉಲ್ಲೇಖವಿದೆ. ಆನೆಗಳ ಮೆರವಣಿಗೆ ವರ್ಷಾಂತರದಿಂದ ನಡೆಯುವ ಆಚರಣೆ. ದೇವಸ್ವಂ ಮಂಡಳಿಯ ಮೇಲುಸ್ತುವಾರಿಯಲ್ಲಿದು ನಡೆಯುತ್ತಿದೆ ಎಂದು ದೇವಸ್ವಂ ಸುಪ್ರೀಂ ಕೋರ್ಟಿಗೆ ತಿಳಿಸಿದೆ.