ಹೆದ್ದಾರಿ ಕಾಮಗಾರಿಗೆ ವಶಪಡಿಸಿದ ಭೂಮಿಯ ನಷ್ಟ ಪರಿಹಾರ ನೀಡಿಲ್ಲ : ಉಪ ಜಿಲ್ಲಾಧಿಕಾರಿಯ ಕಾರು ಜಪ್ತಿ!
ರಾಷ್ಟ್ರೀಯ ಹೆದ್ದಾರಿ ವಿಫುಲೀಕರಣದ ಅಂಗವಾಗಿ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಯ ನಷ್ಟ ಪರಿಹಾರ ನೀಡದೇ ಇದ್ದ ಹಿನ್ನೆಲೆಯಲ್ಲಿ ಕಾಞಂಗಾಡು ಉಪಜಿಲ್ಲಾಧಿಕಾರಿ (sub collector) ಯ ವಾಹನವನ್ನು ನ್ಯಾಯಾಲಯ ಜಪ್ತಿಗೈದಿದೆ.
ಕಾಞಂಗಾಡು ಉಪನ್ಯಾಯಾಲಯದ ನ್ಯಾಯಾಧೀಶ ಎಂ. ಸಿ. ಬಿಜು ಅವರ ಆದೇಶದಂತೆ ಸಬ್ ಕಲೆಕ್ಟರ್ ಕಾರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಒಪ್ಪಿಸಿದರು.
ಇ.ವಿ.ಶಾಂತ, ಇ.ವಿ.ರಮ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಜಪ್ತಿ ಕ್ರಮ ಕೈಗೊಂಡಿದೆ. ಭೂಮಿ ವಿಚಾರದಲ್ಲಿ ಆರು ತಿಂಗಳೊಳಗೆ 5.96ಲಕ್ಷ ರೂ ನಿಡುವಂತೆ ವರ್ಷದ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಒಂದೂವರೆ ವರ್ಷ ದಾಟಿದರೂ ಭೂಮಿಯ ನಷ್ಟ ಪರಿಹಾರ ಭೂಮಾಲಕರಿಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರು ಪರಿಶೀಲಿಸಿದ ನ್ಯಾಯಾಲಯ ಬಡ್ಡಿ ಸಹಿತ 13, 67, 379ರೂ ಪಾವತಿಸಲು ನಿರ್ದೇಶಿಸಿತ್ತು. 2003ರಲ್ಲಿ ಪ್ರಸ್ತುತ ಭೂಮಿಯನ್ನು ವಶಪಡಿಸಲಾಗಿತ್ತು.
ಈ ಜಾಗಕ್ಕೆ ಸೆಂಟಿಗೆ 2ಸಾವಿರ ರೂ ಸರಕಾರ ನಿರ್ಣಯಿಸಿತ್ತು. ಈ ಬೆಲೆ ನಿರ್ಣಯ ಅಗ್ಗವಾಯಿತೆಂದು ಉಲ್ಲೇಖಿಸಿ, ಸೂಕ್ತ ನಷ್ಟ ಪರಿಹಾರ ಒದಗಿಸಬೇಕೆಂದು ಭೂಮಾಲಕರು ನ್ಯಾಯಾಲಯಕ್ಕೆ ದೂರಿತ್ತಿದ್ದರು. ಎಲ್.ಎ.ಸ್ಪೆಷಲ್ ತಹಶೀಲ್ದಾರ್, ರಾ.ಹೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಸಬ್ ಕಲೆಕ್ಟರ್ ವಿರುದ್ಧ ಸಲ್ಲಿಸಲಾದ ದೂರಿನಂತೆ ನ್ಯಾಯಾಲಯ ವಿಚಾರಣೆ ನಡೆಸಿ ನೀಡಿದ ತೀರ್ಪಿನಂತೆ ವಾಹನ ಜಪ್ತಿಗೈಯ್ಯಲಾಗಿದೆ.