- ಅವರು ಭೂಮಿಗೀತದ ನೋವರಿತ ತುಳಸೀ ಮಾತೆ...
- ಪ್ರಕೃತಿಗೆ ಹಸಿರುಡುಗೆ ತೊಡಿಸಿದ ಪದ್ಮಶ್ರೀ ವೃಕ್ಷಮಾತೆ ತುಳಸಿ ಗೌಡ ಇನ್ನಿಲ್ಲ : ಪ್ರಪಂಚಕ್ಕೊಂದು ಪಾಠ ಬರೆದು ಅಗಲಿದ ಹಳ್ಳಿಯಜ್ಜಿ…
ಕಣಿಪುರ ಸುದ್ದಿಜಾಲ
ಹಸಿರ ಗಿಡಗಳನ್ನು ತನ್ನ ಮಗುವಿನಂತೆಯೇ ಪ್ರೀತಿಸಿದ, ಲಕ್ಷಕ್ಕೂ ಅಧಿಕ ಗಿಡ ನೆಟ್ಟು ಮರವಾಗಿ ಬೆಳೆಸಿ, ಭೂಮಿಗೆ ನೆರಳಿನ ಕೊಡೆ ಹಿಡಿದ ಉತ್ತರ ಕನ್ನಡದ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ. 86ವರ್ಷಗಳ ತುಂಬು ಜೀವನದ ವಾರ್ಧಕ್ಯದಲ್ಲಿ ವಯೋಸಹಜ ಖಾಯಿಲೆಗಳಿಂದ ಅಸುನೀಗಿದ ಹಸಿರ ಪ್ರೀತಿಯ ವೃಕ್ಷ ಮಾತೆಯ ಅಗಲುವಿಕೆಗೆಕೇವಲ ಉತ್ತರ ಕನ್ನಡವಲ್ಲ ಕನ್ನಡ ನಾಡೇ ಕಂಬನಿಯ ಮಳೆಗೆರೆದಿದೆ..
ಅಂಕೋಲ : ಪರಿಸರ ಪ್ರೀತಿಯ ವೃಕ್ಷಮಾತೆ, ಪದ್ಮಶ್ರೀ ವಿಭೂಷಿತೆ ತುಳಸೀ ಗೌಡ (86) ಇಂದು ನಿಧನರಾದರು. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಜಗತ್ತಿಗೊಂದು ಪಾಠ ಬರೆದ ಬದುಕನ್ನು ಪೂರೈಸಿ ಅವರು ಅಗಲಿದ್ದಾರೆ.
ಕಳೆದ ಒಂದೂವರೆ ದಶಕದಲ್ಲಿ 30ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿದ ಅವರ ವನ್ಯ ಪ್ರೀತಿ ಅನನ್ಯ.
ಬದುಕಿನಲ್ಲವರು ಯಾವುದೇ ಸೌಲಭ್ಯಗಳಿಲ್ಲದ ಬಡವರು. ಆದರೆ ಅವರ ಪ್ರಕೃತಿ ಪ್ರೀತಿ, ಪರಿಸರ ಕಾಳಜಿ ಅನನ್ಯ. ಗಿಡನೆಟ್ಟು ಭೂಮಿಗೆ ನೆರಳಿತ್ತು, ಪರಿಸರಕ್ಕೆ ಹಸಿರುಣಿಸಿ ಅವರು ಭೂರಮೆಗೆ ನೀಡಿದ ಮಮತೆಯ ವಾತ್ಸಲ್ಯ ಅನುಪಮ. ಈ ಮೂಲಕ ರಾಷ್ಟ್ರೀಯ ಗಮನ ಸೆಳೆದ ಅವರನ್ನು ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. 2020ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ತುಳಸಿ ಗೌಡ ಪದ್ಮಶ್ರೀ ಮುಡಿದಿದ್ದರು.
ಮೃತರು ಸುಬ್ರಾಯ ಮತ್ತು ಸೋನಿ ಎಂಬಿಬ್ಬರು ಮಕ್ಕಳನ್ನಗಲಿದ್ದಾರೆ.
ಮರಗಿಡ, ಔಷಧಿ ಸಸ್ಯಗಳೆಂದರೆ ತುಳಸಿ ಗೌಡ ಅವರಿಗೆ ಮಕ್ಕಳಷ್ಟೇ ಪ್ರೀತಿ. ಜೋಪಾನದಿಂದ ಅದನ್ನು ನೆಟ್ಟು ಪೋಷಿಸುತ್ತಿದ್ದರು. ಅವರೇನೂ ಔಪಚಾರಿಕ ಶಿಕ್ಷಣ ಪಡೆದವರಲ್ಲ, ಆದರೆ ಭೂಮಿಯ ನೋವು ಗೊತ್ತಿತ್ತು. ಪ್ರಕೃತಿಯ ಬವಣೆಯ ಕೊರಗು ಅರಿತಿದ್ದರು. ಆದ್ದರಿಂದಲೇ ಅವರು ಜ್ಞಾನಿಯಾದ ವೃಕ್ಷಮಾತೆ ಎಂದೇ ಕರೆಸಿಕೊಂಡಿದ್ದರು.
ಜೀವನಾಧಾರಕ್ಕೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡುತ್ತಿದ್ದ ಅವರು ಬದುಕನ್ನೇ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಮುಡಿಪಾಗಿಟ್ಟಿದ್ದರು.
1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪಡೆದಿದ್ದ ಅವರು ಪ್ರಕೃತಿ ಮತ್ತು ಗಿಡಗಳೊಂದಿಗೆ ಮಾತನಾಡಿದವರು. ಭೂಮಿಗೀತದ ನೋವು ಅರಿತವರು.