ಯಕ್ಷಗಾನದಲ್ಲಿ ನೇಫಥ್ಯದ ಕಾಯಕ ನಿರ್ಲಕ್ಷಿತ ವಿಭಾಗವಲ್ಲ: ತುಮಕೂರಿನಲ್ಲಿ ಯಕ್ಷದೀವಿಗೆ ದಶಮಾನೋತ್ಸವ ಸಂಮಾನ ಮುಡಿದ ದೇವಕಾನ ಶ್ರೀಕೃಷ್ಣ ಭಟ್
ತುಮಕೂರು : ತೆಂಕುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ಶುದ್ಧತೆ, ಸ್ವಚ್ಛತೆಯೊಂದಿಗೆ ವೇಷಭೂಷಣ ಮತ್ತು ಆಹಾರ್ಯಕ್ಕೆ ಆರೋಗ್ಯಕರ ಬೆಳವಣಿಗೆಯನ್ನಿತ್ತ ಗಣೇಶ ಕಲಾ ವೃಂದ ಪೈವಳಿಕೆ ಇದರ ಸಾರಥಿ ದೇವಕಾನ ಶ್ರೀಕೃಷ್ಣ ಭಟ್ಟರಿಗೆ ಯಕ್ಷದೀವಿಗೆ ತುಮಕೂರು ತನ್ನ ದಶಮಾನೋತ್ಸವ ವರ್ಷಾಚರಣೆಯ ಗೌರವ ಸಂಮಾನವನ್ನಿತ್ತು ಗೌರವಿಸಿದೆ.
ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ವಿ.ಪರಶಿವ ಮೂರ್ತಿ, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ಕಲಾದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ, ಶ್ರೀಕೃಷ್ಣ ಮಂದಿರದ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಮಾರುತಿ ವಿದ್ಯಾಕೇಂದ್ರದ ಉಮಾಪ್ರಸಾದ್ ಮೊದಲಾದವರು ಜತೆಗೂಡಿ ಸನ್ಮಾನ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ದೇವಕಾನ ಶ್ರೀಕೃಷ್ಣ ಭಟ್ಟರು “ಯಕ್ಷಗಾನದಲ್ಲಿ ನೇಪಥ್ಯವನ್ನು ಮತ್ತು ನೇಪಥ್ಯ ಕಲಾವಿದರನ್ನು ಹಿಂದೆ ಕಡೆಗಣಿಸುತ್ತಿದ್ದರು. ಆದರೆ ಈಗ ಸ್ಥಿತಿ ಬದಲಾಗಿದೆ. ರಂಗದಲ್ಲಿ ಪಾತ್ರಧಾರಿ ಮೆರೆಯಬೇಕಾದರೆ ನೇಪಥ್ಯದ ಕೊಡುಗೆ ಅನಿವಾರ್ಯ. ನೇಪಥ್ಯವೂ ಪ್ರದರ್ಶನ ಮತ್ತು ಕಲೆಯ ಅವಿಭಾಜ್ಯ ಘಟಕ ಎಂದರು.
ಯಕ್ಷಗಾನದಲ್ಲಿ ಹವ್ಯಾಸಿ ವೇಷಧಾರಿ, ಅರ್ಥಧಾರಿಯಾಗಿರುವ ಶ್ರೀಕೃಷ್ಣ ಭಟ್ಟರು ಮಂಜೇಶ್ವರ ಎಸ್.ಎ.ಟಿ ಶಾಲಾಧ್ಯಾಪಕರು. ಯಕ್ಷಗಾನ ವೇಷಭೂಷಣ ಕಾಯಕ ಅವರಿಗೆ ತನ್ನ ತಂದೆ ದೇವಕಾನ ಕೃಷ್ಣ ಭಟ್ಟರಿಂದ ಕೈದಾಟಿದ ಬಳುವಳಿ. ದೇವಕಾನದ ಸಮಗ್ರ ಕೊಡುಗೆಗೆ ಈ ಸಂಮಾನ ಸಂದಿದೆ