- ತನ್ಮಯತೆಯಿಂದ ಕಲಿತರಷ್ಟೇ ಸಂಗೀತಕ್ಕೆ ನುಡಿಸುವ ಪರಿಣತ ಕಲಾವಿದರಾಗಲು ಸಾಧ್ಯ..
- ಶ್ರುತಿಮಧುರ
ಸಾಂದ್ರ ವಯಲಿನ್ ದಿನಾಚರಣೆಯ ಹಿನ್ನೆಲೆಯಲ್ಲಿ ಹಿರಿಯ ವಯಲಿನಿಸ್ಟ್ ಪ್ರಭಾಕರ ಕುಂಜಾರು ಮನದ ಮಾತು
ವಯಲಿನ್ ಅತ್ಯಂತ ಶ್ರುತಿಮಧುರವಾದ ಸಾಂದ್ರ ಸಂಗೀತಮಯ ಉಪಕರಣ. ವಯಲಿನ್ ಕಲಿಕೆ ಮತ್ತು ನುಡಿಸಾಣಿಕೆಯಲ್ಲಿ ಪಳಗುವುದೆಂದರೆ ಸುಲಭದ್ದೇನಲ್ಲ. ಅದಕ್ಕೆ ಏಕಾಗ್ರತೆಯ ತನ್ಮಯತೆ ಬೇಕು. ಆದ್ದರಿಂದಲೇ ವಯಲಿನ್ ಕಲಿತವರೆಲ್ಲರೂ ಸಂಗೀತ ಕಛೇರಿಗೆ ನುಡಿಸುವಂತ ಪರಿಣಿತರಾಗುವುದಿಲ್ಲ. ಸಂಗೀತ ಕಛೇರಿಗೆ ನುಡಿಸಬೇಕಿದ್ದರೆ ನುಡಿಸಾಣಿಕೆಯಲ್ಲಿ ಪಳಗಬೇಕು. ಅದಕ್ಕೆ ಧ್ಯಾನಸ್ಥ ಮನೋಸ್ಥಿತಿಯ ಕಲಿಕೆಯ ತನ್ಮಯತೆ ಅಗತ್ಯ ಎಂದು ಗಡಿನಾಡು ಕಾಸರಗೋಡಿನ ಅನುಭವಿ ವಯೋಲಿನಿಸ್ಟ್ ಪ್ರಭಾಕರ ಕುಂಜಾರು ನುಡಿದರು.
ವಿಶ್ವ ವಯಲಿನ್ ದಿನಾಚರಣೆ (ಡಿಸೆಂಬರ್ 13) ಹಿನ್ನೆಲೆಯಲ್ಲಿ “ಕಣಿಪುರ ಡಿಜಿಟಲ್ ಮೀಡಿಯ” ಅವರಿಗೆ ಶುಭಾಶಯ ಕೋರಿ ಮಾತನಾಡಿಸಿದಾಗ ಅವರು ವಯಲಿನ್ ಕುರಿತು ಮಾತಾಡುತ್ತ ಅದರ ನಾದದ ಸೊಬಗಿನ ಮಾಧುರ್ಯಕ್ಕೆ ನಮಿಸಿ ವಾಚಾಳಿಯಾದರು.
ಸಂಗೀತೋಪಕರಣಕ್ಕೂ ಒಂದು ದಿನಾಚರಣೆ…
ಪಾಶ್ಚಾತ್ಯ ಪರಿಕಲ್ಪನೆಗಯ ದಿನಾಚರಣೆ ಇದು. ವಯಲಿನ್ ದಿನಾಚರಣೆ ಬಭಾರತೀಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ಆಚರಿಸುತ್ತಿಲ್ಲ. ಆದರೆ ವಯಲಿನ್ ಎಂಬ ಮೃದು ಉಪಕರಣ ಭಾರತೀಯವಾದ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ತುಂಬಾ ಪೂರಕವಾದ ದೊಡ್ಡ ಮಹತ್ವದ ಕೊಡುಗೆಯನ್ನಿತ್ತಿದೆ. ಈ ಉಪಕರಣವನ್ನು ಬಳಸುತ್ತಾ ಅದನ್ನೀಗ “ಪಿಟೀಲು” ಎಂದೇ ಕನ್ನಡೀಕರಿಸಿಕೊಂಡು ಅದು ನಮ್ಮದ್ದೇ ಎನ್ನುವಂತೆ ಕೊಂಡಾಡುತ್ತೇವೆ. ಆದರೆ ಅದು ಫಿಡಿಲ್ ಎಂಬ ಪದದ ತದ್ಭವವಾಗಿ ಆಡುನುಡಿಯಿಂದ ಹಾಗಾಗಿದೆ. ವಯಲಿನ್ ಎಂಬುದೇ ಮೂಲ ಲ್ಯಾಟಿನ್ ಪದ ಎಂದರು ಪ್ರಭಾಕರ ಕುಂಜಾರು.
ಎರಡು ದಶಕದ ಹಿಂದೆ ನಮ್ಮ ಕರಾವಳಿಯ ಉಡುಪಿಯಿಂದ ಪಯ್ಯನ್ನೂರು ತನಕ ತುಂಬಾ ವಯಲಿನಿಸ್ಟ್ ಗಳಿರಲೇ ಇಲ್ಲ. ಆಗ ಸಂಗೀತ ಕಾರ್ಯಕ್ರಮಕ್ಕೆ ಕೇರಳ -ಕರ್ನಾಟಕಕ್ಕೆ ಕಾಸರಗೋಡಿನಿಂದಲೇ ಹಿಮ್ಮೇಳ ವಾದಕರು, ವಯಲಿನಿಸ್ಟ್ ಗಳು ಹೋಗುತ್ತಿದ್ದರು. ಈಗಲೂ ಕಾಸರಗೋಡು ಜಿಲ್ಲೆಯಲ್ಲೇ ನುರಿತ ಕಲಾವಿದರ ಸಂಖ್ಯೆ ಹೆಚ್ಚಿದೆ. ಇತ್ತೀಚಿನ ಒಂದು ದಶಕದ ಬೆಳವಣಿಗೆಯಿಂದ ನಮ್ಮ ಕರಾವಳಿ ಸಹಿತ ಗಡಿನಾಡಲ್ಲಿ ವಯಲಿನ್ ನುಡಿಸುವ ಎಳೆಯರ ಸಂಖ್ಯೆ ಹೆಚ್ಚಾಗಿದೆ. ಎಲ್ಲೆಡೆ ಕಲಿಸುವ ಗುರುಗಳು ಲಭ್ಯರಿರುವುದರಿಂದ ವಿದ್ಯಾರ್ಥಿಗಳು ರೂಪುಗೊಂಡಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಕುಂಜಾರು ಹೇಳಿದರು.
ವಯಲಿನ್ ಕಲಿಯುವವರ ಸಂಖ್ಯೆ ಹೆಚ್ಚಾದರೂ ಅದನ್ನು ಗಂಭೀರವಾಗಿ ಪರಿಗಣಿಸುವವರ ಸಂಖ್ಯೆ ಕಡಿಮೆ. ಗಂಭೀರವಾಗಿ ಅಧ್ಯಯನ ಮಾಡಿ, ತನ್ಮಯತೆಯಿಂದ ಕಲಿತರಷ್ಟೇ ಉತ್ತಮ ಪರಿಜ್ಞಾನದ ಕಲಾವಿದರಾಗಲು ಸಾಧ್ಯ. ಹೀಗಾಗಬೇಕಿದ್ದರೆ ಸತತ ಸಾಧನೆಯೊಂದಿಗೆ ಶ್ರುತಿಬದ್ಧ ನುಡಿಸಾಣಿಕೆ ಸಿದ್ಧಿಸಬೇಕು. ಅದಕ್ಕೆ ಸಾಧನೆ ಎಂಬ ತಪ ಬೇಕು ಎಂದು ಕುಂಜಾರು ನುಡಿದರು.
ಹೊಸ ಪೀಳಿಗೆಯ ಮಕ್ಕಳಿಗೆ ಫ್ಯೂಷನ್ ಆಕರ್ಷಣೀಯವಾಗಿದೆ. ಸ್ವಲ್ಪ ಕಲಿತು ಫ್ಯೂಷನ್, ಕೀರ್ತನೆಗಳಿಗೆ ನುಡಿಸುವವರೇ ಅಧಿಕ. ಆದರೆ ಸಂಗೀತಕ್ಕೆ ನುಡಿಸಬೇಕಿದ್ದರೆ ವಯಲಿನ್ ನುಡಿಸಾಣಿಕೆಯಲ್ಲಿ ಉನ್ನತ ಪರಿಜ್ಞಾನ ಪಡೆಯಬೇಕು.
ಹಾಡಿನ ರಾಗವನ್ನು ಅನುಸರಿಸುವ ಅರಿವು ಬರಬೇಕು. ಗಾಯನವನ್ನು ಮೀರದೇ, ಅಪಸ್ವರ ಬಾರದೇ ನುಡಿಸಬೇಕು. ಮುಖ್ಯವಾಗಿ ಗಾಯಕ/ಗಾಯಕಿಯ ಮನೋಧರ್ಮ, ಗಾನದ ರಾಗಬದ್ನತೆಯ ಅರಿವಿರಬೇಕು ಎಂದು ಪ್ರಭಾಕರ ಕುಂಜಾರು ಹೇಳಿದರು.