- ಗ್ರಾಮೀಣ ಮುಳ್ಳೇರಿಯದ ವಾಣಿಜ್ಯ, ವ್ಯವಸಾಯ ಉನ್ನತಿಗೆ ಉತ್ಸವದ ಕಳೆ ನೀಡುವ ಹಬ್ಬ…
- ಡಿ. 21ರಿಂದ 27ರ ತನಕ ವೈಶಿಷ್ಟ್ಯಮಯ ಮುಳ್ಳೇರಿಯ ಟ್ರೇಡ್ ಫೆಸ್ಟಿವಲ್ : 2ನೇ ವರ್ಷದ ಫೆಸ್ಟ್ ಯಶಸ್ಸಿಗೆ ಸಿದ್ಧತೆ, ಆಹ್ವಾನ ಪತ್ರಿಕೆ, ಟಿಕೆಟ್ ಕೂಪನ್ ಬಿಡುಗಡೆ
ಮುಳ್ಳೇರಿಯ : ಕಾಸರಗೋಡು ಜಿಲ್ಲೆಯ ಗ್ರಾಮೀಣ ಪಟ್ಟಣವಾದ ಮುಳ್ಳೇರಿಯದಲ್ಲಿ ಡಿ.21ರಿಂದ 27ರ ತನಕ ಎರಡನೇ ವರ್ಷದ ಮುಳ್ಳೇರಿಯ ಟ್ರೇಡ್ ಫೆಸ್ಟ್
ನಡೆಯಲಿದ್ದು, ಗ್ರಾಮೀಣೋತ್ಸವದ ಯಶಸ್ಸಿಗೆ ವಿಫುಲ ಸಿದ್ಧತೆ ನಡೆಯುತ್ತಿದೆ.
ಮುಳ್ಳೇರಿಯ ಪೇಟೆ ಮತ್ತು ಪರಿಸರದ ವಾಣಿಜ್ಯೋದ್ಯಮಗಳ ಅಭಿವೃದ್ಧಿ ಮತ್ತು ಉದ್ಯಮ -ಗ್ರಾಹಕ-ನಾಗರಿಕರ ನಡುವೆ ಸವಿನಯದ ಸ್ನೇಹ ಸೇತು ಬೆಳೆಸುವ ಧ್ಯೇಯೋದ್ದೇಶದ
ಟ್ರೇಡ್ ಫೆಸ್ಟ್ ನಲ್ಲಿ ಕೃಷಿಯಂತ್ರ ಮೇಳ, ವಿವಿಧ ರುಚಿಕರ ತಿಂಡಿ ತಿನಿಸಿನ ಖಾದ್ಯಗಳು, ವಿವಿಧ ರೀತಿಯ ಮಳಿಗೆಗಳು, ಮಕ್ಕಳಿಗೂ, ಹಿರಿಯರಿಗೂ ವೈವಿಧ್ಯ ಸಾಂಸ್ಕೃತಿಕ ಮನೋರಂಜನೆ, ವಿವಿಧ ಉತ್ಪನ್ನ, ಯಂತ್ರೋಪಕರಣಗಳ ಮಾಹಿತಿ ಕಾರ್ಯಾಗಾರ, ದೈನಂದಿನ ಸಂಜೆ ಗಣ್ಯರ ಉಪಸ್ಥಿತಿಯ ಸಾಂಸ್ಕೃತಿಕ ಸಂಜೆ ಸೇರಿದಂತೆ ಮುಳ್ಳೇರಿಯ ಪರಿಸರಕ್ಕೊಂದು ಉತ್ಸವ ಪ್ರತೀತಿಯ ಸಂಭ್ರಮ ಮೂಡಿಸಿ ಫೆಸ್ಟ್ ನಡೆಯಲಿದೆ.
ಮುಳ್ಳೇರಿಯ ಪೇಟೆಯ ವೀರೇಂದ್ರ ನಗರದಲ್ಲಿ ದೈನಂದಿನ ಸಂಜೆ 4ರಿಂದ ರಾತ್ರಿ 10ರ ತನಕ ನಡೆಯುವ ಫೆಸ್ಟ್ ನ್ನು ಮುಳ್ಳೇರಿಯ ಬ್ಯುಸಿನೆಸ್ ಅಸೋಸಿಯೇಷನ್ (ರಿ) ಆಯೋಜಿಸಿದೆ. ದೈನಂದಿನ ಸರಾಸರಿ 10 ಸಾವಿರದಂತೆ ಒಂದು ವಾರದಲ್ಲಿ 70ಸಾವಿರ ಮಂದಿ ಫೆಸ್ಟ್ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಂತೆ ಈಗಾಗಲೇ ನೂರಾರು ಮಳಿಗೆಗಳ ಮುಂಗಡ ಬುಕ್ಕಿಂಗ್ ನಡೆದಿದ್ದು,ನಾಗರಿಕರಲ್ಲಿದು ಸಂಭ್ರಮ ಮೂಡಿಸಿದೆ ಮತ್ತು ಮುಳ್ಳೇರಿಯ ಪೇಟೆಗೆ ಭಾರೀ ಜನಾಗಮನದ ನವವಸಂತ ಮೂಡಿಸುವ ಭರವಸೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದು ಕೇವಲ ವಾಣಿಜ್ಯ ಮೇಳವಲ್ಲ.
ಮುಳ್ಳೇರಿಯದಂಥ ಪುಟ್ಟ ಗ್ರಾಮೀಣ ಪ್ರದೇಶದ ವ್ಯಾಪಾರೋದ್ಯಮವನ್ನು ಮತ್ತು ನಾಡನ್ನು ನಾಗರಿಕರ ಸಹಭಾಗಿತ್ವದಲ್ಲಿ ವಿಕಸನಗೊಳಿಸುವ ಸುಂದರ ಕಲ್ಪನೆ. ಈ ಟ್ರೇಡ್ ಫೆಸ್ಟ್ ಮುಳ್ಳೇರಿಯಕ್ಕೊಂದು ಉತ್ಸವದ ಕಳೆ ನೀಡುತ್ತದೆ. ಸರ್ವ ನಾಗರಿಕರೂ ಇದು ನಮ್ಮ ನಾಡಿನ ಸಂಭ್ರಮವೆಂದು ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಮನೋರಂಜನೆ, ಶಾಪಿಂಗ್ ನಡೆಸುತ್ತಲೇ ವಿವಿಧ ಉತ್ಪನ್ನ, ಗೃಹಬಳಕೆಯ ಉಪಕರಣ ಇನ್ನಿತ್ಯಾದಿ ಅಪೂರ್ವ ಮಾಹಿತಿಯ ಅರಿವು ಪಡೆಯುತ್ತಾರೆ. ಒಂದೂರಿನ ಅಭ್ಯುದಯದಲ್ಲಿ ಇಂಥ ಹೆಜ್ಜೆಗಳಿಗೆ ಜನರಿಂದ ಸಿಗುವ ಬೆಂಬಲಗಳೇ ಅದರ ಊರುಗೋಲು
-ರಂಗ ಶರ್ಮ ಉಪ್ಪಂಗಳ,(ಉದ್ಯಮಿ, ಪ್ರತಿನಿಧಿ -ಮುಳ್ಳೇರಿಯ ಬ್ಯುಸಿನೆಸ್ ಅಸೋಸಿಯೇಷನ್)
ಟ್ರೇಡ್ ಫೆಸ್ಟ್ ಯಶಸ್ಸಿನ ಸಮಾಲೋಚನೆಗಾಗಿ ನಿನ್ನೆ ಮುಳ್ಳೇರಿಯ ಗಣೇಶ ಮಂದಿರದಲ್ಲಿ ಬ್ಯುಸಿನೆಸ್ ಅಸೋಸಿಯೇಷನ್ ಸಭೆ ಜರುಗಿತು.
ಸಭೆಯಲ್ಲಿ ಹಿರಿಯ ಉದ್ಯಮಿ ರಂಗನಾಥ ಶೆಣೈ ಮುಳ್ಳೇರಿಯ ಟ್ರೇಡ್ ಫೆಸ್ಟ್ ನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಹಿರಿಯ ಪತ್ರಕರ್ತ, ಲೇಖಕ, ಕಣಿಪುರ ಮೀಡಿಯ ಗ್ರೂಪ್ ಎಡಿಟರ್ ಎಂ.ನಾ.ಚಂಬಲ್ತಿಮಾರ್ ಫೆಸ್ಟ್ ನ ಟಿಕೇಟ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಫೆಸ್ಟ್ ಗೆ ಶುಭಾಶಯ ಕೋರಿ ಮಾತಾಡಿದ ಅವರು “ಮುಳ್ಳೇರಿಯದ ಉದ್ಯಮಿ, ವರ್ತಕರದ್ದು ಮಾದರಿ ಹೆಜ್ಜೆ. ಇದು ನಾಡಿನ ಪುಟ್ಟ ಪಟ್ಟಣಗಳಿಗೆ , ಅಲ್ಲಿನ ವಾಣಿಜ್ಯ ವ್ಯವಸಾಯ ಪುರೋಗತಿಗೆ ಮಾದರಿ. ಮುಂಬರುವ ದಿನಗಳಲ್ಲಿದು ಗಡಿನಾಡಿನ ಮಹಾ ಫೆಸ್ಟ್ ಆಗಲಿ” ಎಂದರು.
ಮುಳ್ಳೇರಿಯ ಬ್ಯುಸಿನೆಸ್ ಅಸೋಸಿಯೇಷನ್ ಅಧ್ಯಕ್ಷ ಅಗ್ನೇಶ್, ಕಾರ್ಯದರ್ಶಿ ಹರೀಶ್, ಕೋಶಾಧಿಕಾರಿ ಸುರೇಶ್ ರಾವ್, ಫೆಸ್ಟ್ ಸಂಚಾಲಕ ವಿಜಯನ್, ನಿಕಟ ಪೂರ್ವ ಅಧ್ಯಕ್ಷ ರಂಗನಾಥ ರಾವ್, ಉದ್ಯಮಿ ರಂಗ ಶರ್ಮ ಉಪ್ಪಂಗಳ, ಕ್ಯಾಂಪ್ಕೋ ನಿರ್ದೇಶಕ ಕೆ.ಎಸ್.ಎನ್.ಪ್ರಸಾದ್, ಗಣೇಶ ವತ್ಸ ನೆಕ್ರಾಜೆ, ರಂಗನಾಥ ಶೆಣೈ, ಶ್ರೀಕಾಂತ್ ಗುಲಗುಂಜಿ, ಪ್ರಜಿತ್ ಮೊದಲಾದವರು ಉಪಸ್ಥಿತರಿದ್ದರು.