ಕುಂಬಳೆ ಪೇಟೆಯಲ್ಲಿ ಆಟೋ ರಿಕ್ಷಾಗಳಿಗೆ ಸ್ಟೇಂಡ್ ಒದಗಿಸದ ಪಂಚಾಯತ್ :
ನಿರ್ಲಕ್ಷ್ಯ ನೀತಿ ಖಂಡಿಸಿ ರಿಕ್ಷಾ ಚಾಲಕರಿಂದ ಸತ್ಯಾಗ್ರಹ, ಪಂ.ಕಚೇರಿಗೆ ಪ್ರತಿಭಟನಾ ಮಾರ್ಚ್
ಕುಂಬಳೆ ಪೇಟೆಯಲ್ಲಿ ಆಟೋ ರಿಕ್ಷಾಗಳಿಗೆ ಸೂಕ್ತ ಆಟೋಸ್ಟೇಂಡ್ ಒದಗಿಸಿಕೊಡದ ಗ್ರಾಮಪಂಚಾಯತ್ ನಿರ್ಲಕ್ಷ್ಯ ನೀತಿ ಖಂಡಿಸಿ ಸಂಯುಕ್ತ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಗೊಂಡಿತು.
ಸತ್ಯಾಗ್ರಹದ ಅಂಗವಾಗಿ ರಿಕ್ಷಾ ಚಾಲಕರು ಕುಂಬ್ಳೆ ಗ್ರಾ.ಪಂ.ಗೆ ಇಂದು ಪ್ರತಿಭಟನಾ ಮಾರ್ಚ್ ನಡೆಸಿದರು.
ಕುಂಬಳೆ ಪೇಟೆಯಲ್ಲಿ ರಿಕ್ಷಾಗಳ ಸಂಖ್ಯೆ ಹೆಚ್ಚಳಗೊಂಡಿದೆಯಾದರೂ ಪಂಚಾಯತಿನಿಂದ ನೂತನ ರಿಕ್ಷಾ ಸ್ಟೇಂಡ್ ನಿರ್ಮಾಣವಾಗಿಲ್ಲ. ಪರಿಣಾಮ ಸ್ಟೇಂಡಲ್ಲದ ಜಾಗದಲ್ಲಿ ರಿಕ್ಷಾ ಬಾಡಿಗೆಗೆ ಇರಿಸಿದರೆ ಆರ್.ಟಿ.ಒ ಅಧಿಕಾರಿಗಳು ಬಂದು ದಂಡ ವಿಧಿಸುತ್ತಿದ್ದಾರೆ. ನಮ್ಮದ್ದಲ್ಲದ ತಪ್ಪಿಗೆ ನಾವು ದಂಡ ವಿಧಿಸಬೇಕಾಗುತ್ತಿದೆ. ರಸ್ತೆ ಅಭಿವೃದ್ಧಿಗೊಂಡ ಬೆನ್ನಲ್ಲೇ ಆಟೋ ಸ್ಟ್ಯಾಂಡ್ ಒದಗಿಸಿಕೊಡಬೇಕೆಂದು ಹತ್ತಾರು ಸಲ ಪಂಚಾಯತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಸತ್ಯಾಗ್ರಹಕ್ಕೆ ಮುಂದಾಗಿರುವುದಾಗಿ ರಿಕ್ಷಾ ಚಾಲಕರು ತಿಳಿಸಿದ್ದಾರೆ.
ಪಂ.ಕಚೇರಿ ಮುಂಭಾಗದ ಪ್ರತಿಭಟನಾ ಸಭೆಯನ್ನು ಅಬ್ಬಾಸ್ ಮೊಗ್ರಾಲ್ ಉದ್ಘಾಟಿಸಿದರು. ಸಿಐಟಿಯು ಆಟೋ ಚಾಲಕರ ಯೂನಿಯನ್ ಜಿಲ್ಲಾಧ್ಯಕ್ಷ ಪಿ.ಎ.ರಹ್ಮಾನ್ ಅಧ್ಯಕ್ಷತೆ ವಹಿಸಿದರು. ಷರೀಫ್, ಫ್ರಾನ್ಸಿಸ್ ಡಿ ಸೋಜ, ದಿನೇಶ್ ಎಂ.ಸಿ, ಅಬ್ಬಾಸ್ ಮೊಗ್ರಾಲ್ , ಆಲಿ ಬಾಯಿ ಮೊದಲಾದವರು ನೇತೃತ್ವ ನೀಡಿದರು. ಭೋಜರಾಜ್ ಸ್ವಾಗತಿಸಿದರು.