- ಬೇಕಾಗಿರುವುದು ವಕ್ಫ್ ಕಾಯ್ದೆಯ ಪರಿಷ್ಕರಣೆಯಲ್ಲ, ಭೂಮಿ ಕಬಳಿಸುವ ಆ ಕರಾಳ ಕಾಯ್ದೆಯ ರದ್ಧತಿ : ಕುಂಬಳೆ ಜನಜಾಗೃತಿ ಸಭೆಯಲ್ಲಿ ಹಿಂದೂ ಐಕ್ಯ ವೇದಿಕೆ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹರಿದಾಸ್ ಆಗ್ರಹ
ಕುಂಬಳೆ : ಭಾರತ ಭೂಮಿಯನ್ನೇ ಕಪಟ, ಕರಾಳ ಕಾನೂನಿನ ಮೂಲಕ ತನ್ನದ್ದಾಗಿಸುವ ವಕ್ಫ್ ಕಾಯ್ದೆಗೆ ಬೇಕಾಗಿರುವುದು ಪರಿಷ್ಕರಣೆಯಲ್ಲ, ಅದರ ಸಂಪೂರ್ಣ ರದ್ಧತಿ. ಇಂದೀಗ ವಕ್ಫ್ ಕೇವಲ ಹಿಂದೂಗಳದ್ದಷ್ಟೇ ಸಮಸ್ಯೆಯಲ್ಲ, ಇಡೀ ದೇಶದ ನಾನಾ ರಾಜ್ಯದ ಮನುಷ್ಯರ ಬವಣೆಯಾಗಿದೆ. ಭಾರತದ ಚಾರಿತ್ರಿಕ ನೆಲಗಳೇ ಒಂದು ಸುಪ್ರಭಾತಕ್ಕೆ ವಕ್ಖ್ ಎಂದ ಮಾತ್ರಕ್ಕೆ ಅನ್ಯರಾಧೀನವಾಗುವುದು ಹೇಗೆ..? ನ್ಯಾಯಾಂಗಕ್ಕೂ ಹಸ್ತಕ್ಷೇಪ ಮಾಡಲಾಗದ ಈ ಕಾನೂನು ಚಾಲ್ತಿಗೆ ತಂದು, ದೇಶವನ್ನೇ ಒತ್ತೆ ಇಡುವಂತೆ ಮಾಡಿದವರು ನಮ್ಮ ದೇಶದ ಮೊದಲ ಪ್ರಧಾನಿ ನೆಹರೂ. ಆದ್ದರಿಂದಲೇ ವಕ್ಫ್ ಪರಿಷ್ಕರಣೆಯೋ, ತಿದ್ದುಪಡಿಯೋ ಅಗತ್ಯವಿಲ್ಲ. ಅಗತ್ಯವಾಗಿರುವುದು ಕಾನೂನನ್ನೂ ಮೀರಿದ, ಕೇವಲ ವಾಚಿಕಕ್ಕೂ ಹಕ್ಕು ಉಳ್ಳ ವಕ್ಫ್ ಕಾಯ್ದೆಯನ್ನೇ ರದ್ದು ಪಡಿಸುವುದಾಗಿದೆ ಎಂದು ಹಿಂದೂ ಐಕ್ಯ ವೇದಿಕೆ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ ಹರಿದಾಸ್ ಆಗ್ರಹಿಸಿದರು.
ಹಿಂದೂ ಐಕ್ಯ ವೇದಿಕೆ ಕುಂಬಳೆ ಘಟಕದ ನೇತೃತ್ವದಲ್ಲಿ ನಿನ್ನೆ (ಡಿ.10) ಕುಂಬಳೆ ಪೇಟೆಯಲ್ಲಿ ವಖ್ಫ್ ಕಾಯ್ದೆಯ ಭೂಸ್ವಾಧೀನ ಖಂಡಿಸಿ ನಡೆದ ಹಿಂದೂ ಜನಜಾಗೃತಿ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು ವಕ್ಫ್ ಹೆಸರಲ್ಲಿ ಜಾತಿ,ಮತ, ಭೇದ ಇಲ್ಲದೇ ನೂರಾರು ಮನುಷ್ಯರ ಮನೆ, ಸೊತ್ತುಗಳು ಹಾಗೂ ಸಾವಿರಾರು ವರ್ಷ ಹಿನ್ನೆಲೆಯ ಆರಾಧನಾಲಯಗಳ ಭೂಮಿ ಅನ್ಯರಾಧೀನವಾಗುವಾಗ ಇಲ್ಲಿನ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಆರೋಪಿಸಿದರು.
“ಕೇರಳ ವಿಧಾನಸಭೆಯಲ್ಲಿ ಪ್ರತಿಯೊಂದಕ್ಕೂ ಆಡಳಿತ -ವಿರೋಧ ಪಕ್ಷ ವ್ಯತ್ಯಾಸ ಇಲ್ಲದೇ ಠರಾವು ಮಂಡಿಸಿ ಕೈಜೋಡಿಸುವ, ಉಗ್ರಗಾಮಿಗಳು ಸತ್ತರೆ ಮೊಂಬತ್ತಿ ಇಟ್ಟು ಪ್ರಾರ್ಥಿಸಿ ಕಣ್ಣೀರುಗೆರೆಯುವ, ಬೀದಿ ಬೀದಿ ಮೆರವಣಿಗೆ ನಡೆಸುವವರು ಬಾಂಗ್ಲಾದಲ್ಲಿ ಹಿಂದೂ ಅಲ್ಪ ಸಂಖ್ಯಾತರ ದಮನ ನಡೆಯುತ್ತಿರುವಾಗ ಮಾನುಷಿಕತೆ, ಅಲ್ಪಸಂಖ್ಯಾತರ ರಕ್ಷಣೆ ಎಂದು ಏಕೆ ಕೂಗೆಬ್ಬಿಸುವುದಿಲ್ಲ..? ರಾಜಕೀಯದ ಒಳಸಂಚನ್ನು ಹಿಂದೂಗಳು ಅರಿಯದಿದ್ದರೆ ಅಪಾಯ ಕಾದಿದೆ ಎಂದು ಕೆ.ಪಿ.ಹರಿದಾಸನ್ ನುಡಿದರು.
ಕುಂಬಳೆ ಜನಜಾಗರಣ ಸಮಿತಿ ಅಧ್ಯಕ್ಷ ಪ್ರಶಾಂತ್ ಪಿ.ಎಚ್ ಅಧ್ಯಕ್ಷತೆ ವಹಿಸಿದರು. ಹಿಂದೂ ಐಕ್ಯವೇದಿಕೆ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ದಿಕ್ಸೂಚಿ ಭಾಷಣ ಮಾಡಿದರು.
ಬಿ.ಜೆ.ಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್ ಅತಿಥಿಗಳಾಗಿ ಪಾಲ್ಗೊಂಡು ಭಾಷಣ ಮಾಡಿದರು.
ಹಿಂದೂ ಐಕ್ಯ ವೇದಿಕೆ ಮಹಿಳಾ ಘಟಕದ ಜಲ್ಲಾಧ್ಯಕ್ಷೆ ವಸಂತಿ ಕೃಷ್ಣನ್, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉಪಸ್ಥಿತರಿದ್ದರು.
ಹಿಂದೂ ಐಕ್ಯ ವೇದಿಕೆ ಮಂಜೇಶ್ವರ ತಾಲೂಕು ಅಧ್ಯಕ್ಷ ಸುರೇಶ್ ಶಾಂತಿಪಳ್ಳ ಸ್ವಾಗತಿಸಿದರು. ಕುಂಬ್ಳೆ ಘಟಕ ಅಧ್ಯಕ್ಷ ಸುಕುಮಾರನ್ ಕುತ್ತಿಕೋಲ್ ವಂದಿಸಿದರು.