ಕಾಸರಗೋಡು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕಟುವಾಗಿ ಟೀಕಿಸಿ ನೋಟೀಸು ಮುದ್ರಿಸಿ ಪ್ರಚಾರ ಮಾಡಿದ್ದಾರೆಂಬ ಆಪಾದನೆ ಎದುರಿಸುತ್ತಿದ್ದ ಕಾಸರಗೋಡು ಜಿಲ್ಲಾ ಕಾನೂನು ಇಲಾಖೆ ಸೆಕ್ರೆಟರಿ ಆಕಾಶ್ ರವಿ ಅವರನ್ನು ಸೇವೆಯಿಂದ ಅಮಾನತುಗೈಯ್ಯಲಾಗಿದೆ.
ಕೇರಳ ಸೆಕ್ರೇಟರಿಯೇಟ್ ಎಂಪ್ಲಾಯಿಸ್ ಸಂಘ್ ಅಧ್ಯಕ್ಷರಾಗಿದ್ದ ಆಕಾಶ್ ರವಿ ಸೆಕ್ರೇಟರಿಯೇಟ್ ಉದ್ಯೋಗದಲ್ಲಿದ್ದಾಗ ತಾವು ಪ್ರತಿನಿಧೀಕರಿಸುವ ಸಂಘಟನೆಗಾಗಿ ಮುದ್ರಿಸಿದ ನೋಟೀಸಿನಲ್ಲಿ ಮುಖ್ಯಮಂತ್ರಿ ಅವರನ್ನು ವಿಮರ್ಶಿಸಿ ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ನ್ನು ಅಪಕೀರ್ತಿಗೊಳಿಸಿದ್ದಾರೆಂಬ ಅಪರಾಧ ಉಲ್ಲೇಖಿಸಿ ಶಿಸ್ತು ಕ್ರಮದಂಗವಾಗಿ ಪಾಲಕ್ಕಾಡು ಜಿಲ್ಲೆಗೆ ಹಿಂಬಡ್ತಿ ನೀಡಿ ವರ್ಗಾಯಿಸಲಾಗಿತ್ತು. ಬಳಿಕ ಕಾಸರಗೋಡು ಜಿಲ್ಲಾ ಕಾನೂನು ಸೆಕ್ರೇಟರಿಯಾಗಿ ನೇಮಕ ಮಾಡಲಾಗಿತ್ತು.
ಇವರ ಮೇಲಣ ಆಪಾದನೆಯ ಹಿನ್ನೆಲೆಯಲ್ಲಿ ತನಿಖಾಧಿಯೊಬ್ಬರನ್ನು ನೇಮಿಸಲಾಗಿತ್ತು. ಆದರೆ ತನಿಖಾಧಿಕಾರಿ ತನ್ನಿಂದ 50 ಸಾವಿರ ರೂ ಬಯಸಿ, “ದೇಶಾಭಿಮಾನಿ”ಗೆ ದೇಣಿಗೆ ಇತ್ತರೆ ಪ್ರಕರಣದ ಶಿಕ್ಷಾ ಕ್ರಮದಿಂದ ಪಾರು ಮಾಡುವುದಾಗಿ ಹೇಳಿದ್ದರೆಂದು ಆಕಾಶ್ ರವಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ಕಳಂಕಿತಗೊಳಿಸಿದ್ದು ಮತ್ತು ಮುಖ್ಯಮಂತ್ರಿಯವರನ್ನು ಅಪಕೀರ್ತಿಪಡಿಸಿದ್ದು ಸೇರಿದಂತೆ ಆಪಾದನೆಯ ಹಿನ್ನೆಲೆಯಲ್ಲಿ ಆಕಾಶ್ ರವಿ ಅವರನ್ನು ಅಮಾನತುಗೈದು ಗೃಹಖಾತೆ ಆದೇಶಿಸಿದೆ.