- ಕಾನೂನು ಉಲ್ಲಂಘಿಸಿ ರಸ್ತೆಯಲ್ಲಿ ರೀಲ್ಸ್ ಸಲ್ಲದು:
ರಸ್ತೆಯಲ್ಲಿ ರೀಲ್ ಚಿತ್ರೀಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆಗೆ ಮಾನವ ಹಕ್ಕು ಆಯೋಗ ನಿರ್ದೇಶ
ಕಾಸರಗೋಡು : ರೀಲ್ಸ್ ಎಂಬ ಮೋಜಿಗೆ ಬಿದ್ದು ಕೆಲವರು ಪ್ರಾಣ ಕಳಕೊಂಡ ಹಿನ್ನೆಲೆ ಗಮನಿಸಿ ಮಾನವ ಹಕ್ಕುಗಳ ಆಯೋಗ ಗರಂ ಆಗಿದೆ. ಸಾರಿಗೆ ಸಂಚಾರ ಕಾನೂನುಗಳನ್ನು ಉಲ್ಲಂಘಿಸಿ , ತಮ್ಮ ಪ್ರಾಣಕ್ಕೂ ನಾಗರಿಕರ ಪ್ರಾಣಕ್ಕೂ ಕಂಟಕವಾಗುವಂತೆ ಸಾರ್ವಜನಿಕ ರಸ್ತೆಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ.ಬೈಜುನಾಥ್ ಕೇರಳ ಪ್ರಾಂತ್ಯ ಪೋಲೀಸ್ ಮೇಧಾವಿಗೆ ನಿರ್ದೇಶನವಿತ್ತಿದ್ದಾರೆ.
ಕಲ್ಲಿಕೋಟೆ ಬೀಚ್ ರೋಡಿನಲ್ಲಿ ಪ್ರರಮೋಷನ್ ರೀಲ್ ಚಿತ್ರೀಕರಿಸುತ್ತಿರುವಾಗ ಕಾರುಢಿಕ್ಕಿಯಾಗಿ ವೀಡಿಯೋಗ್ರಾಫರ್ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಅವರು ಈ ಆದೇಶ ಇತ್ತಿದ್ದಾರೆ.
ರಸ್ತೆ ಸಂಚಾರಕ್ಕಡ್ಡಿಯಾಗುವಂತೆ ರೀಲ್ಸ್ ಚಿತ್ರೀಕರಣ ನಡೆಸಿದವರ ವಿರುದ್ದ ಈಗಾಗಲೇ ಕೈಗೊಂಡ ಕಾನೂನು ಕ್ರಮಗಳ ವರದಿಯನ್ನು ಒಂದು ತಿಂಗಳೊಳಗೆ ಮಾನವ ಹಕ್ಕು ಆಯೋಗಕ್ಕೆ ಒದಗಿಸಬೇಕೆಂದು ಆಯೋಗ ಪೋಲೀಸ್ ಮೇಧಾವಿಗೆ ಸೂಚಿಸಿದೆ.
ರೀಲ್ಸ್ ಚಿತ್ರೀಕರಣದ ವೇಳೆ ಕೋಝಿಕ್ಕೋಡ್ ನಲ್ಲಿ ವೀಡಿಯೋಗ್ರಾಫರ್ ಮೃತಪಟ್ಟ ಘಟನೆ ಕುರಿತು ಕೂಡಾ ಸಮಗ್ರವಾದ ವರದಿ ಒಪ್ಪಿಸುವಂತೆ ಕೋಝಿಕ್ಕೋಡ್ ಪೋಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಹುಚ್ಚಾಟ ಮೆರೆದು ರೀಲ್ಸ್ ಚಿತ್ರೀಕರಣ ಮಾಡುವುದು ಇತರ ವಾಹನ ಸವಾರರಿಗೂ, ನಾಗರಿಕ ಪಾದಚಾರಿಗಳಿಗೂ ಜೀವಾಪಾಯದ ಕಂಟಕ ತಂದೊಡ್ಡುತ್ತಿರುವುದರಿಂದ ಇಂಥ ಪ್ರವೃತ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಪೋಲೀಸ್ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ ಜನಪ್ರಿಯತೆಗಾಗಿ ರಸ್ತೆಗಳಲ್ಲಿ ಕಾನೂನು ಉಲ್ಲಂಘಿಸಿ ನಾನಾ ರೀತಿಯ ಚಿತ್ರೀಕರಣ ನಡೆಸುವುದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತದರ ವರದಿಯನ್ನು ಸಮರ್ಪಿಸುವಂತೆ ಮಾನವ ಹಕ್ಕು ಆಯೋಗ ಖಡಕ್ ಸೂಚನೆ ನೀಡಿದೆ.