ಕುಂಬಳೆ ಕಣಿಪುರ ಕ್ಷೇತ್ರದ ಸೇವಾಶುಲ್ಕ ದುಪ್ಪಟ್ಟು ಹೆಚ್ಚಳಕ್ಕೆ ದೇವಸ್ವಂ ಯೋಚನೆ: ಸೇವಾಶುಲ್ಕ ಹೆಚ್ಚಳಕ್ಕೆ ಭಕ್ತಾದಿಗಳ ವಿರೋಧ : ಯೋಚನೆ ಹಿಂತೆಗೆಯಲು ಭಕ್ತರ ಮನವಿ

by Narayan Chambaltimar

ಕಣಿಪುರ ಸುದ್ದಿಜಾಲ

ಕುಂಬಳೆ ಸೀಮೆಯ ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಸಲ್ಲಿಸುವ ಸೇವೆಗಳ ಶುಲ್ಕವನ್ನು ದುಪ್ಪಟ್ಟು ಅಧಿಕಗೊಳಿಸಲು ಮಲಬಾರ್ ದೇವಸ್ವಂ ಮಂಡಳಿ ಮುಂದಾಗಿದೆ. 2025 ಜನವರಿ 1ರಿಂದ ಸೇವಾ ಶುಲ್ಕ ಹೆಚ್ಚಳ ಚಾಲ್ತಿಗೆ ಬರಲಿದೆಯೆಂದು ಸೂಚಿಸಲಾಗಿದ್ದು, ಆಕ್ಷೇಪಗಳಿದ್ದಲ್ಲಿ ಡಿ.10ರ ಮುಂಚಿತ ದೇವಸ್ವಂಗೆ ತಿಳಿಸಬೇಕೆಂದು ಉಲ್ಲೇಖಿಸಿ ಸಾರ್ವಜನಿಕ ಮಾಹಿತಿಗೆ ಸೂಚನಾ ಫಲಕ ಹಾಕಲಾಗಿದೆ. ಇದನ್ನು ಕಂಡು ಸಾರ್ವಜನಿಕ ಭಕ್ತರು ದೇವಸ್ವಂ ಉದ್ದೇಶವನ್ನು ವಿರೋಧಿಸಿ, ಸೇವಾ ಶುಲ್ಕ ಹೆಚ್ಚಳ ಯೋಚನೆ ಕೈಬಿಡಲು ಮನವಿ ಸಲ್ಲಿಸಿ ವಿನಂತಿಸಿದ್ದಾರೆ.

ಭಕ್ತರಿಂದ ಆಕ್ಷೇಪದ ಮನವಿ

ಊರ,ಪರವೂರ ಭಕ್ತರು ಲಕ್ಷಾಂತರ ರೂ ವ್ಯಯಿಸಿ 35ವರ್ಷಗಳ ಬಳಿಕ ಕಣಿಪುರ ದೇವಳವನ್ನು ಜೀರ್ಣೋದ್ದಾರ ಗೊಳಿಸಿದ್ದು, ನವೀಕರಿಸಿದ ಕಾಮಗಾರಿಗಳ ಶುಚಿತ್ವ, ಶುಭ್ರತೆ ಕಾಪಾಡುವ ಬದಲು ದೇವಳದ ಸೇವಾ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಲು ಹೊರಟ ದೇವಸ್ವಂ ಮಂಡಳಿ ಹುನ್ನಾರ ಖಂಡನೀಯ ಮತ್ತು ಸೇವಾಶುಲ್ಕ ಹೆಚ್ಚಳ ನಿರ್ಧಾರ ಹಿಂತೆಗೆಯಬೇಕೆಂದು ಬ್ರಹ್ಮಕಲಶ ಸಮಿತಿ ಸಹಿತ ಭಕ್ತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಸಾರ್ವಜನಿಕ ಭಕ್ತರ ಆಕ್ಷೇಪದ ಮನವಿಯನ್ನು ದೇವಸ್ವಂ ಮತ್ತು ದೇವಸ್ವಂ ಸಚಿವರಿಗೂ ಕಳುಹಿಸಲಾಗಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿಗೂ ಸಮರ್ಪಿಸಲಾಯಿತು.

ಸೇವೆಗಳಿಗೆ ಅರ್ಧಾಂಶಕ್ಕಿಂತಲೂ ಅಧಿಕ, ದುಪ್ಪಟ್ಟು ದರ ಏರಿಕೆ ಸೂಚಿಸಿರುವ ದರ ಪಟ್ಟಿ ಗಮನಿಸಿದರೆ ದೇವರನ್ನು ಮುಂದಿಟ್ಟುಕೊಂಡು ಭಕ್ತರ ಸೇವೆಯ ಮರೆಯಲ್ಲಿ ಸರಕಾರ ದೇವಾಲಯಗಳನ್ನು ಕೊಳ್ಳೆ ಹೊಡೆಯಲು ಹೊರಟಂತಿದೆ ಎಂದು ಭಕ್ತ ಜನರು ಆಕ್ಷೇಪಿಸಿದ್ದಾರೆ

ಕಣಿಪುರ ಕ್ಷೇತ್ರದಲ್ಲಿ ಇನ್ನೂ ಹಲವಾರು ಕೆಲಸಗಳು ನಡೆಯಲು ಬಾಕಿ ಇದೆ. ಅದಕ್ಕೂ ಭಕ್ತಜನರ ಸಹಕಾರವೇ ಅಗತ್ಯವಾಗಿದೆ.ಈ ಹಿನ್ನೆಲೆಯಲ್ಲಿ ಸದ್ಯ ಸೇವಾ ಶುಲ್ಕ ಹೆಚ್ಚಳ ಅಂಗೀಕರಿಸುವಂತದ್ದಲ್ಲ ಎಂದು ಭಕ್ತರು ಅಭಿಪ್ರಾಯಪಟ್ಟರು.
ಮನವಿ ಸಲ್ಲಿಸಿದ ನಿಯೋಗದಲ್ಲಿ ಬಿ.ರಘುನಾಥ ಪೈ, ಮಡ್ವ ಮಂಜುನಾಥ ಆಳ್ವ, ಲಕ್ಷ್ಮಣ ಪ್ರಭು ಕುಂಬ್ಳೆ, ಶಂಕರ ಆಳ್ವ ಕೋಟೆಕಾರು, ವಿಕ್ರಂ ಪೈ, ಸುಧಾಕರ ಕಾಮತ್ ಮೊದಲಾದವರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00