ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ತಿ, ಕೇಂದ್ರದ ಮಾಜಿ ಸಚಿವ ಎಸ್. ಎಂ ಕೃಷ್ಣ (92) ಮಂಗಳವಾರ (ಡಿ.10 ರಂದು) ನಸುಕಿನ ಜಾವ 2:45ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 93ವರ್ಷ ವಯಸ್ಸಾಗಿತ್ತು.
ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಶ್ವಾಸಕೋಶ ಸಂಬಂಧೀ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.
2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದರು.ವಿಧಾನಸಭಾ ಸ್ಪೀಕರ್, ಉಪಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರ ಸಚಿವ, ಮಹಾರಾಷ್ಟ್ರದ ರಾಜ್ಯಪಾಲ ಮುಂತಾದ ಹುದ್ದೆಗಳನ್ನು ಪಡೆದಿದ್ದರು.
ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗುವುದು. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ (ಡಿ.11 ರಂದು) ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಎಸ್ ಎಂ ಕೃಷ್ಣ ಅವರ ದೀರ್ಘಕಾಲದ ಒಡನಾಡಿಗಳು, ಸಂಬಂಧಿಗಳು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರಂಭಿಕ ಜೀವನ: ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ 1932 ರ ಮೇ 1ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಎಸ್ಎಂ ಕೃಷ್ಣ ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್ನಿಂದಲೂ ಪದವಿ ಪಡೆದಿದ್ದರು.