ಏಷ್ಯಾಖಂಡದಲ್ಲೇ ಅತೀ ದೊಡ್ಡ ಉತ್ಕೃಷ್ಟ ಕಲೋತ್ಸವವೆಂದೇ ಖ್ಯಾತಿ ಪಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಉದ್ಘಾಟನೆಯ,ವೇಳೆ ಪ್ರದರ್ಶಿಸಲಿರುವ ಸ್ವಾಗತ ನೃತ್ಯ ವಿನ್ಯಾಸಗೊಳಿಸಲು ಮಲಯಾಳದ ಪ್ರಮುಖ ನರ್ತಕಿಯೂ ಆದ ನಟಿಯೊಬ್ಬರು 5ಲಕ್ಷ ರೂ ಸಂಭಾವನೆ ಕೇಳಿದ್ದಾರೆಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರೆ.
ನಟಿಯ ಬೇಡಿಕೆಯನ್ನು ತಿರಸ್ಕರಿಸಿರುವ ಸಚಿವರು ಈ ನಟಿ ಯಾರೆಂದು ತಿಳಿಸದೇ “ಶಾಲಾ ಕಲೋತ್ಸವಗಳಲ್ಲಿ ಪ್ರತಿಭೆಯಾಗಿ ಮೂಡಿಬಂದು, ಅನಂತರ ಸಿನಿಮಾ ನಟಿಯಾಗಿ ದುಡ್ಡು ಬಾಚಿದಾಗ ಕೆಲವರಿಗೆ ದುಡ್ಡಿನ ವ್ಯಾಮೋಹ ತಲೆಗೇರುತ್ತದೆ. ಅವರಿಗೆ ನಮ್ಮ ನಾಡು, ಕಲೆ, ಸಂಸ್ಕೃತಿ ಬಗ್ಗೆ ಎಳ್ಳಷ್ಟೂ ಅಭಿಮಾನದ ಪ್ರೀತಿ ಇಲ್ಲ. ಆದ್ದರಿಂದಲೇ ಸ್ವಾಗತ ನೃತ್ಯ ವಿನ್ಯಾಸಗೊಳಿಸುವ ಅವಕಾಶವನ್ನು ಪ್ರತಿಭಾವಂತ ಯುವ ನೃತ್ಯ ಪ್ರತಿಭೆಗಳಿಗೆ ನೀಡಲಾಗುವುದೆಂದು ಸಚಿವರು ಘೋಷಿಸಿದ್ದಾರೆ.
ಆದಿತ್ಯವಾರ ಸಂಜೆ ತಿರುವನಂತಪುರದ ವೆಂಞ್ಞಾರಮೂಡ್ ಎಂಬಲ್ಲಿ ನಡೆದ ವೃತ್ತಿಪರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಈ ವಿಷಯ ಬಹಿರಂಗ ಪಡಿಸಿದ ಸಚಿವರು ಕಲಾವಿದರು ಹಣದ ಮದ ಹೊಂದಿ ಆಹಂಕರಿಸಬಾರದೆಂದೂ, ಅವರಿಗೆ ಕಲೆ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯ ಮೇಲೆ ಬದ್ಧತೆ ಇರಬೇಕೆಂದೂ ತಿಳಿಸಿದರು.
ಸಚಿವರ ಹೇಳಿಕೆ ಕೇರಳದ ಸಾಂಸ್ಕೃತಿಕ ವಲಯದಲ್ಲಿ ಚರ್ಚಿತವಾಗುತ್ತಿದೆ. ಆದರೆ 5ಲಕ್ಷ ರೂ ಬೇಡಿಕೆ ಇಟ್ಟ ನಟಿಯಾರೆಂಬುದನ್ನು ಪ್ರಕಟಿಸದೇ ಇರುವುದರಿಂದ ವದಂತಿ ಹರಡುತ್ತಿದೆ. ಈ ಬೆಳವಣಿಗೆಯಿಂದ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗಿದೆ.