ನಮ್ಮ ಆಚಾರನುಷ್ಠಾನಗಳ ಭಾಗವಾದ ಉತ್ಸವಗಳನ್ನು ಆಡಂಬರದ ವೈಭೋಗಗಳ ದುಂದುವೆಚ್ಚಗಳಿಂದ ಮುಕ್ತಗೊಳಿಸಿ ಆಚಾರನುಷ್ಟಾನದ ಪಾವಿತ್ರ್ಯತೆಗೆ ಪ್ರಾಧಾನ್ಯತೆ ನೀಡಬೇಕೆಂದು ಸಂದೇಶ ನೀಡಿದ್ದ ಶ್ರೀನಾರಾಯಣ ಗುರುಗಳ ಮಹತ್ವಚನ ಪರಿಪಾಲಿಸ ಬೇಕು ಮತ್ತು ಉತ್ಸವಾಚರಣೆಗಳಿಂದ ಸಿಡಿಮದ್ದು ಸಹಿತ ಆಚಾರದ ಭಾಗವಲ್ಲದ ಆಡಂಬರಗಳನ್ನೆಲ್ಲ ತ್ಯಜಿಸಬೇಕೆಂದು ಹಿಂದೂ ಐಕ್ಯ ವೇದಿಕೆ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹರಿದಾಸ್ ಅಭಿಪ್ರಾಯ ಪಟ್ಟರು.
ಆಧುನಿಕ ದಿನಮಾನದಲ್ಲಿ ಔಚಿತ್ಯ ಅರಿಯದೇ ವಿಜೃಂಭಣೆಯ ನೆಪದಲ್ಲಿ ಆಡಂಬರದ ವೈಭೋಗಗಳ ಬೆನ್ನೇರಿರುವ ಹಿಂದೂ ಸಮಾಜ ಅದರಿಂದ ಹಿಂಜರಿದು, ಬದಲಿಗೆ ಸೇವಾಪಥದಲ್ಲಿ ಮುಂದುವರಿಯಬೇಕೆಂದು ಅವರು ನುಡಿದರು.
ಹಿಂದೂ ಐಕ್ಯವೇದಿಕೆಯ ಕಾಸರಗೋಡು ಜಿಲ್ಲೆಯ ಕಳ್ಳಾರ್ ಪಂಚಾಯತ್ ಸಮಾವೇಶ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಡ್ಕಂ ಬಾಲಕೃಷ್ಣನ್, ದಾಮೋದರನ್ ವಾಯವಳಪ್ಪ್, ಚಾತುನಾಯರ್ ಕೊಚ್ಚಿಯಿಲ್, ಒ ಕೃಷ್ಣನ್ ಒರಳ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಐಕ್ಯವೇದಿಕೆ ನಿನ್ನೆ ಮತ್ತು ಇಂದು ಎಂಬ ವಿಷಯದಲ್ಲಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಮಾತನಾಡಿದರು.
ಹಿಂದೂ ಐಕ್ಯವೇದಿಕೆ ಜಿಲ್ಲಾ ರಕ್ಷಾಧಿಕಾರಿ ಗೋವಿಂದನ್ ಮಾಸ್ಟರ್, ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡು, ಸಂಘಟನಾ ಸೆಕ್ರೆಟರಿ ಸುಧಾಕರನ್ ಕೊಳ್ಳಿಕೋಡ್ ಮೊದಲಾದವರು ಮಾತನಾಡಿದರು