ವಯನಾಡು ಭೂಕುಸಿತದ ನಿರಾಶ್ರಿತರ ಪುನರ್ವಸತಿಗೆ ಸಂಬಂಧಿಸಿ ಎಸ್ ಡಿ ಆರ್ ಎಫ್ (state disaster relief fund)ನಿಂದ ಎಷ್ಟು ಮೊತ್ತ ವ್ಯಯಿಸಲಾಯಿತೆಂಬ ಸ್ಪಷ್ಟ ಅಂಕಿ ಅಂಶ ಸಹಿತವಾದ ಲೆಕ್ಕಪತ್ರ ಪ್ರಕಟಿಸದೇ ಇರುವುದನ್ನು ಉಲ್ಲೇಖಿಸಿ ಕೇರಳ ಹೈಕೋರ್ಟು ಕೇರಳ ಸರಕಾರವನ್ನು ಕಟುವಾಗಿ ಟೀಕಿಸಿದೆ.
ರಾಜ್ಯ ಸರಕಾರ ಸ್ಪಷ್ಟವಾದ ಅಂಕಿ ಅಂಶ ಸಹಿತವಾದ ಲೆಕ್ಕಪತ್ರ ನೀಡದಿದ್ದರೆ ಕೇಂದ್ರ ಸರಕಾರ ಪುನರ್ವಸತಿಗಾಗಿ ಧನ ಸಹಾಯ ಮಂಜೂರು ಮಾಡುವುದಾದರೂ ಹೇಗೆಂದು ಹೈಕೋರ್ಟು ವಿಭಾಗೀಯ ಪೀಠ ಪ್ರಶ್ನಿಸಿದೆ.
ವಯನಾಡು ಪುನರ್ವಸತಿಗೆ ಕೇಂದ್ರ ಸರಕಾರ ಧನ ಸಹಾಯ ಮಂಜೂರು ಮಾಡದೇ ಕಾಲವಿಳಂಬ ಮಾಡುತ್ತಿದೆಯೆಂದು ಆಡಳಿತ ಪಕ್ಷ ಮತ್ತು ವಿಪಕ್ಷ ಟೀಕಿಸುತ್ತಿರುವಾಗಲೇ ಈ ವಿಷಯದಲ್ಲಿ ರಾಜ್ಯ ಸರಕಾರವನ್ನು ಹೈಕೋರ್ಟು ಟೀಕಿಸಿರುವುದು ರಾಜಕೀಯ ವಲಯದಲ್ಲಿ ನೂತನ ಬೆಳವಣಿಗೆಗೆ ನಾಂದಿ ಹಾಡಿದೆ
ವಯನಾಡು ಪುನರ್ವಸತಿ ನಿಧಿ ಮಂಜೂರಾತಿಗೆ ಸಂಬಂಧಿಸಿ ಕೇರಳ ಮತ್ತು ಕೇಂದ್ರ ಸರಕಾರದ ನಡುವೆ ಆರೋಪ ಪ್ರತ್ಯಾರೋಪ ಹೊರಿಸುವುದನ್ನು ನಿಲ್ಲಿಸುವಂತೆಯೂ ಸೂಚಿಸಿದ ಹೈಕೋರ್ಟಿನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸರಕಾರದ ಫಿನಾನ್ಶಿಯಲ್ ಆಫೀಸರ್ ವಿಫಲರಾದರು. ವಯನಾಡು ಪುನರ್ವಸತಿಗೆ ಕೇರಳ ವಿನಿಯೋಗಿಸಿದ ಹಣ ಮತ್ತು ಕೇಂದ್ರ ಮಂಜೂರು ಮಾಡಿದ ಧನ ಸಹಾಯದ ಅಂಕಿ ಅಂಶ ವರದಿಯನ್ನು ಗುರುವಾರ ಹೈಕೋರ್ಟಿಗೆ ಸಲ್ಲಿಸುವಂತೆ ವಿಭಾಗೀಯ ಪೀಠ ಆದೇಶಿಸಿದೆ..