ಗೋಕರ್ಣದ ಅಶೋಕೆಯಲ್ಲಿ ವೇದ ವೇದಾಂಗ ಸಹಿತ ಜ್ಯೋತಿಷ್ಯವೇ ಮೊದಲಾದ ಪರಂಪರಾಗತ ಸನಾತನ 64ಕಲಾಶಿಕ್ಷಣ ನೀಡುವ ವಿಷ್ಣುಗುಪ್ತ ವಿಶ್ವವಿದ್ಯಾಲಯವನ್ನು ಸಮಾಜಕ್ಕೆ ಪರಿಚಯಿಸುವ ದೃಷ್ಟಿಯಿಂದ ದೇಶದಾದ್ಯಂತ ಸವಾರಿ ಹೊರಟಿರುವ ಶ್ರೀರಾಮಚಂದ್ರಾಪುರ ಮಠದ ಯತಿ ಪರಂಪರೆಯ ಸ್ವರ್ಣ ಪಾದುಕಾ ಸವಾರಿಗೆ ಕುಂಬಳೆಯಲ್ಲಿ ಭಕ್ತ್ಯಾದರದ ಸ್ವಾಗತ ನೀಡಿ ಸ್ವರ್ಣ ಪಾದುಕಾ ಪೂಜೆಗಳೊಂದಿಗೆ ನಮಿಸಲಾಯಿತು.
ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲದ, ಕುಂಬಳೆ ವಲಯ ಘಟಕದ ಆಶ್ರಯದಲ್ಲಿ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯಿತು.
ಕುಂಬಳೆ ವಲಯದ ಶೇಡಿಗುಮ್ಮೆ ಮತ್ತು ಕಣಿಪುರ ಘಟಕಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.
ಶಂಕರಾಚಾರ್ಯ ಪರಂಪರೆಯ 36 ಯತಿವರ್ಯರ ಪಾದಸ್ಪರ್ಶಗಳ ದಿವ್ಯ ಸಾನ್ನಿಧ್ಯ ಸಂಕಲ್ಪವಾದ ಸ್ವರ್ಣ ಪಾದುಕಾ ಸವಾರಿಯು ನಿನ್ನೆಯೇ ಮುಂಡಪ್ಪಳ್ಳ ರಾಜರಾಜೇಶ್ವರಿ ಕ್ಷೇತ್ರಕ್ಕೆ ಚಿತ್ತೈಸಿದೆ. ನಿನ್ನೆ ರಾತ್ರಿ (ಡಿ.5) 7ಕ್ಕೆ ಕ್ಷೇತ್ರದ ಮೊಕ್ತೇಸರ, ಉದ್ಯಮಿ ಕೆ ಕೆ.ಶೆಟ್ಟಿಅವರ ವತಿಯಿಂದ ಪಾದುಕೆಗೆ ಧೂಳೀ ಪೂಜೆ ಸೇವೆ ನಡೆಯಿತು. ಇಂದು (ಡಿ.6) ಬೆಳಿಗ್ಗೆ ಕುಂಬಳೆಯ ಪ್ರಸಿದ್ಧ ವೈದ್ಯ ಡಾ ಡಿ.ಪಿ.ಭಟ್ಟರ ಪುತ್ರ ಆದರ್ಶ ಕುಂಬಳೆ ಅವರಿಂದ ಸ್ವರ್ಣ ಪಾದುಕಾ ಪೂಜೆ ಸೇವೆ,
ಉದ್ಯಮಿ, ದಾನಿ ಕೆ.ಕೆ ಶೆಟ್ಟಿ ಅವರಿಂದ ಭಿಕ್ಷಾಂಗ ಪಾದುಕಾ ಸೇವೆಗಳು ನಡೆಯಿತು.
ಶ್ರೀಮಠದ ಯತಿವರ್ಯರ ಸ್ವರ್ಣಪಾದುಕೆಯನ್ನು ಭಕ್ತಾದಿಗಳಿಗೆ ಪ್ರತ್ಯಕ್ಷ ದರ್ಶನದಿಂದ ಸಾಕ್ಷೀಕರಿಸಿ ನಮಸ್ಕರಿಸುವ ಮೂಲಕ ಪ್ರಸಾದ ಪಡೆಯುವ ಅವಕಾಶಗಳಿದ್ದುವು. ಕಳೆದ ಒಂದು ವರ್ಷದಿಂದ ಸ್ವರ್ಣ ಪಾದುಕೆಯು ಸಮಾಜದ ಜನರೆಡೆಯಲ್ಲಿ ಸಂಚಾರದಲ್ಲಿದ್ದು ಶ್ರೀ ರಾಮಚಂದ್ರಾಪುರ ಮಠದ ವಿಷ್ಣುಗುಪ್ತ,ವಿಶ್ವವಿದ್ಯಾಲಯದ ಪ್ರಚಾರ ನಿರತವಾಗಿದೆ. ಶ್ರೀಮಠದ ಗಜಾನನ ಭಟ್(ಆಚಾರ-ವಿಚಾರ) ಅವರು ಪಾದುಕಾ ಸವಾರಿಯ ಸಂಚಾಲನತ್ವ ವಹಿಸಿದ್ದು, ಕುಂಬಳೆಯ ಮುಂಡಪಳ್ಳದಿಂದ ಸವಾರಿಯು ಕುಂಟಾರಿಗೆ ತೆರಳಿದೆ.