- ಮುಂಡಪಳ್ಳ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಡಿ.25ರಂದು ಶ್ರೀದೇವಿ,ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ
ಕುಂಬಳೆ ಸಮೀಪದ ನಾಯ್ಕಾಪು ಬಳಿಯ ದರ್ಬಾರ್ ಕಟ್ಟೆಯ ಮುಂಡಪಳ್ಳದಲ್ಲಿ ಅಸ್ತಿತ್ವಕ್ಕೆ ಬಂದು ಪ್ರಸಿದ್ಧವಾಗುತ್ತಿರುವ ಶ್ರೀರಾಜರಾಜೇಶ್ವರಿ ಕ್ಷೇತ್ರ ಪರಿಸರದಲ್ಲಿ ಇದೇ ಡಿ.25ರಂದು ಬುಧವಾರ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಜರಗಲಿದೆ.
ಏಳುಬೆಟ್ಟಗಳೊಡೆಯ ತಿರುಪತಿಯ ತಿಮ್ಮಪ್ಪ, ಕಲಿಯುಗದ ವೈಕುಂಠ ತಿರುಪತಿಯ ಶ್ರೀನಿವಾಸನ ಕಲ್ಯಾಣೋತ್ಸವ ಸಂಭ್ರಮವು ಕುಂಬಳೆ ಪರಿಸರದಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಬೆಂಗಳೂರಿನ ರಾಮಾನುಜ ಮಠದ ಶ್ರೀ ಉ/ ವೇ. ಪ್ರ. ಮೋಹನಕೃಷ್ಣ ಆಚಾರ್ಯ ಮತ್ತು ಸಹ ಆಚಾರ್ಯರುಗಳ ನೇತೃತ್ವದಲ್ಲಿ ಪಂಚರಾತ್ರ ಆಗಮ ವಿಧಾನದಲ್ಲಿ ಕಲ್ಯಾಣೋತ್ಸವ ಜರಗಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುಂಡಪಳ್ಳ ರಾಜರಾಜೇಶ್ವರಿ ದೇವಾಲಯದಲ್ಲಿಂದು ಬಿಡುಗಡೆಗೊಂಡಿತು.
ಮುಂಡಪ್ಪಳ್ಳ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕಲ್ಯಾಣೋತ್ಸವಕ್ಕೆ ಭಕ್ತಾದಿಗಳೆಲ್ಲರನ್ನು ಆದರದಿಂದ ಸ್ವಾಗತಿಸಿ ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಂಬೈಯ ಕೆ.ಪಿ.ಆಳ್ವ, ಬಿ.ಎಂ ಆಳ್ವ, ಕೆ.ಎಂ ಆಳ್ವ, ಮಂಜುನಾಥ ಆಳ್ವ ಮಡ್ವ, ಜಯಪ್ರಕಾಶ್ ರೈ, ಡಾ.ಪುರುಷೋತ್ತಮ ಭಟ್, ಗುರುಮೂರ್ತಿ ನಾಯ್ಕಾಪು, ಶಿವರಾಂ ಭಟ್ ಹಳೆಮನೆ, ಪತ್ರಕರ್ತ ಎಂ.ನಾ.ಚಂಬಲ್ತಿಮಾರ್, ಮುರಳೀಧರ ಯಾದವ್ ನಾಯ್ಕಾಪು, ಸತ್ಯಶಂಕರ ಭಟ್, ರವಿನಾಥ ರೈ, ದಾಮೋದರ ಶೆಟ್ಟಿ, ಪದ್ಮನಾಭ ಶೆಟ್ಟಿ, ವಿನೋದ ರೈ, ಉಷಾ ಶಿವರಾಮ್ ಭಟ್ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡರು.
ಕುಂಬಳೆ ಪರಿಸರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಇದೇ ಮೊದಲ ಬಾರಿಗೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ನಾಡಿನ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸತ್ಕಾರ್ಯಗಳಿಗೆ ಮಹಾದಾನಗೈದು ಸಮಾಜದ ಏಳಿಗೆಗೆ ಅಹರ್ನಿಶಿ ಕೊಡುಗೆ ನೀಡುತ್ತಿರುವ, ಈ ಸಾಲಿನ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರಿಗೆ ಸನ್ಮಾನ ನಡೆಯಲಿದೆ. ಸಮಾರಂಭದಲ್ಲಿ ಮುಂಬಯಿಯ ಡಾ. ಸತ್ಯಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.