ಒಂದು ಕಾಲಕ್ಕೆ ಅಖಂಡ ಭಾರತದ ಭೂಭಾಗವೇ ಆಗಿದ್ದ ಬಾಂಗ್ಲಾದೇಶದಲ್ಲಿಂದು ಅಲ್ಲಿನ ಮೂಲನಿವಾಸಿಗಳೂ ಒಳಗೊಂಡ ಅಲ್ಪಸಂಖ್ಯಾತ ಹಿಂದೂಗಳನ್ನು ನಿರ್ದಯೆಯಿಂದ ವಿನಾ ಕಾರಣ ದೌರ್ಜನ್ಯ ಎಸಗಿ ವಂಶಹತ್ಯೆ ನಡೆಸಲಾಗುತ್ತಿದೆ.ಇದು ಖಂಡನೀಯ. ಆದರೆ ನಮ್ಮ ದೇಶದಲ್ಲಿ ದಿನ ಬೆಳಗಾದರೆ ಜನಪರ, ಜಾತ್ಯಾತೀತ, ಮಾನವತೆ ಎಂದು ಮೊಸಳೆ ಕಣ್ಣೀರು ಸುರಿಸುವ ಎಡಪಂಥೀಯ ಮತ್ತು ಬೆಂಬಲಿಗ ಒಕ್ಕೂಟದವರು ಇದನ್ನೊಂದು ವಿಷಯವನ್ನಾಗಿ ಪರಿಗಣಿಸಿ ಸ್ಪಂದಿಸುವುದೇ ಇಲ್ಲ. ಬದಲಿಗೆ ಬಾಂಗ್ಲಾದಲ್ಲಿ ಅಂತದ್ದೇನೂ ನಡೆದೇ ಇಲ್ಲ ಎಂದು ಸಮರ್ಥಿಸಿ ಭಾರತೀಯ ಸೆಕ್ಯುಲರಿಸಂ ಮಾತಾಡುವವರು ತೋರಿಸುವ ಜಾಣ ಮೌನ ನಮ್ಮ ದೇಶದ ಸಾಂಸ್ಕೃತಿಕ, ಸಾಮಾಜಿಕ ನೆಮ್ಮದಿಗೆ ಅಪಾಯಕಾರಿಯಾಗಿದೆ ಎಂದು ಹಿರಿಯ ವಿದ್ವಾಂಸ, ಪ್ರಸಿದ್ದ ಚಿಂತಕ, ಖ್ಯಾತ ಕಲಾವಿಮರ್ಶಕ ಡಾ.ಎಂ. ಪ್ರಭಾಕರ ಜೋಷಿ ಅಭಿಪ್ರಾಯ ಪಟ್ಟರು.
ನಮ್ಮಲ್ಲಿ ಯಾರಾದರೂ ಸತ್ತರೆ ಮೊಂಬತ್ತಿ ಇಟ್ಟು ಪ್ರತಿಭಟಿಸುವ, ಉಗ್ರಗಾಮಿಗಳ ಬಂಧನವಾದರೆ ಪ್ರಧಾನಿಗಳೇ ನ್ಯಾಯಕೊಡಿ ಎಂದು ಕಣ್ಣೀರು ಸುರಿಸುವವರು ಹಿಂದೂಗಳಿಗೆ ಅನ್ಯಾಯವಾದಾಗ ಮಾತಾಡದೇ ಜಾಣ ಮೌನದ ಮೊರೆ ಹೋಗಿದ್ದಾರೆ. ಇದು ಹಿಟ್ ಏಂಡ್ ರನ್ ಅಲ್ಲ, ಸ್ಪ್ಲಿಟ್ ಏಂಡ್ ರನ್ ಎಂದು ಡಾ.ಜೋಷಿ ವಿಶ್ಲೇಷಿಸಿದರು.
ನಮ್ಮಲ್ಲಿ ದಿನ ಬೆಳಗಾದರೆ ಸಂವಿಧಾನ, ಅಂಬೇಡ್ಕರ್ ,ಮಾನವತೆ, ಬಹುತ್ವ, ಸಾಹೋದರ್ಯ ಎಂದು ಕರುಣಾಳುಗಂತೆ ಮಾತಾಡುವವರಿಗೆ ಬಾಂಗ್ಲಾದಲ್ಲಿ ಭಾರತೀಯ ಮೂಲದ ಹಿಂದೂ ವಂಶ ಹತ್ಯೆ ನಡೆಯುತ್ತಿರುವುದು ಕಾಣುವುದಿಲ್ಲವೇ? ಅವರೇನು ನಮ್ಮಂತೆಯೇ ಮನುಷ್ಯರಲ್ಲವೇ ?ಅವರಿಗೂ ಮಾನವ ಹಕ್ಕು ಇಲ್ಲವೇ ? ಅವರಿಗೂ ಅಲ್ಪಸಂಖ್ಯಾತ ಹಕ್ಕುಗಳು ಇಲ್ಲವೇ?
ಏಂದು ಡಾ.ಜೋಷಿ ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಬುದ್ಧಿಜೀವಿಗಳಂತೆ ನಟಿಸುವ ಕೆಲವರು ಹಿಂದೂಗಳಿಂದ ಆಗದೇ ಇರುವ ಹಿಂಸೆಯನ್ನು ವೈಭವೀಕರಿಸಿ ಬಣ್ಣಿಸುತ್ತಾರೆ. ಅದೇ ಹಿಂದೂಗಳಿಗೆ ಅನ್ಯಾಯ ಆದಾಗ ಜಾಣ ಮೌನದಿಂದ ಬಿಲದೊಳಗೆ ಹೊಕ್ಕು ಅಡಗುತ್ತಾರೆ. ಇದೆಂಥ ಸೆಕ್ಯುಲರಿಸಂ..? ಅನ್ಯಾಯ ಯಾರಿಂದಲೇ ಆಗಲಿ, ಅದು ಪ್ರತಿಭಟನಾರ್ಹ. ಆದರೆ ಸೆಕ್ಯುಲರಿಸಂ ಹೆಸರಲ್ಲಿ ಹಿಂದೂ ವಂಶೀಯ ಹತ್ಯೆಯನ್ನು ಖಂಡಿಸದೇ, ಬಾಂಗ್ಲಾ ಪರ ವಕಾಲತ್ತಿಗೆ ನಿಂತು, ಅವರ ವಕ್ತಾರರಂತೆ ಮಾತಾಡುವ ಪರಿಸ್ಥಿತಿ ನಮ್ಮಲ್ಲಿ ಉಂಟಾಗಿದೆ ಎಂದರೆ ಜಾತ್ಯಾತೀತತೆಯ ಹೆಸರಲ್ಲಿ ಹಿಂದೂ ವಿರುದ್ಧ ನಿಲುವಿನ ಮೂಲಭೂತವಾದಿ ಬೆಂಬಲದ ಮನೋಧರ್ಮ ನಮ್ಮಲ್ಲೂ ಬಿತ್ತಲ್ಪಡುತ್ತಿವೆ ಎಂದಲ್ಲವೇ ಅರ್ಥ ?ಎಂದು ಜೋಷಿ ಕಳವಳ ಪ್ರಕಟಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಈ ಅನ್ಯಾಯ, ವಿವೇಚನೆಗಳನ್ನು ಕಂಡು ನಮ್ಮಂತಿರುವ ನಾಗರಿಕರು ಬೇಜಾರು ಪಡುವಂತಾಗಿದೆ. ಎಷ್ಟು ಕಾಲ ಇಂಥದ್ದನ್ನೆಲ್ಲ ಮಾಡುತ್ತಾರಿವರು? ಮುಸಲ್ಮಾನರು ಜಗತ್ತಿನಾದ್ಯಂತ ಒಂದೇ ರಾಗ, ಒಂದೇ ಆಶಯಕ್ಕೆ ಬದ್ಧರಾಗಿ ಮಾತಾಡಿದರೆ ನಮ್ಮ ದೇಶದ ಹಿಂದೂ ರಾಜಕಾರಣಿಗಳು ಯಾವುದೇ ದಾಕ್ಷಿಣ್ಯ, ಭಯ, ಲಜ್ಜೆ ಇಲ್ಲದೇ ಬಾಯಿಗೆ ಬಂದಂತೆ ಮಾತಾಡುವುದು ಕಂಡರೆ ಇದೇನೆಂದು ಅರ್ಥವಾಗುತ್ತದೆ ಎಂದು ಜೋಷಿ ನುಡಿದರು.