ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲ ಭೇದನ
: ಗುಜರಾತಿನಲ್ಲಿ 13ಮಂದಿ ನಕಲಿ ವೈದ್ಯರ ಬಂಧನ
ಗುಜರಾತ್ ನ ಸೂರತ್ ಪೋಲೀಸರು ನಕಲಿ ವೈದ್ಯಕೀಯ ಪದವಿಯ ಜಾಲವನ್ನು ಭೇದಿಸಿದ್ದಾರೆ. ಜಾಲದ ಮಾಸ್ಟರ್ ಮೈಂಡ್ ಮತ್ತು ನಕಲಿ ಪದವಿ ಖರೀದಿಸಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದವರೂ ಸೇರಿದಂತೆ 13ಮಂದಿಯನ್ನು ಬಂಧಿಸಲಾಗಿದೆ.
ವೈದ್ಯಕೀಯ ಅರ್ಹತೆಯ ನಕಲಿ ಸರ್ಟಿಫಿಕೇಟಿಗೆ 60 ಸಾವಿರದಿಂದ 1ಲಕ್ಷದ ವರೆಗೆ ನೀಡಲಾಗುತಿತ್ತು. ಈ ರೀತಿಯಲ್ಲಿ ನಕಲಿ ಸರ್ಟಿಫಿಕೇಟು ಪಡೆದವರಲ್ಲಿ ಬಹುತೇಕರು 12ನೇ ತರಗತಿ ಪಾಸ್ ಆಗಿದ್ದು, ವಿವಿದೆಡೆ ವೃತ್ತಿ ನಡೆಸುತ್ತಿದ್ದರೆಂಬ ಆತಂಕಕಾರಿ ಮಾಹಿತಿ ಪೋಲೀಸರು ನೀಡಿದ್ದಾರೆ.
ಈ ಜಾಲದ ಮಾಸ್ಟರ್ ಮೈಂಡ್ ರಸೇಶ್ ಗುಜರಾತಿ ಎಂದು ಗುರುತಿಸಿ ಬಂಧಿಸಲಾಗಿದೆ. ಈತ ಸೂರತ್ ನಿವಾಸಿಯಾಗಿದ್ದು ಸಹ ಆರೋಪಿ ಬಿ.ಕೆ.ರಾವತ್ ಎಂಬಾತನ ಸಹಾಯದಿಂದ ನಕಲಿ ಸರ್ಟಿಫಿಕೇಟ್ ತಯಾರಿಸುತ್ತಿದ್ದನು. ಸುಮಾರು 1,500ಕ್ಕೂ ಅಧಿಕ ಮಂದಿಗೆ ಇವರು ನಕಲಿ ಸರ್ಟಿಫಿಕೇಟು ವಿತರಿಸಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.
ಪಾಂಡೆಸರಾ ಪ್ರದೇಶದಲ್ಲಿ ಆರೋಪಿಗಳು ನಡೆಸುತ್ತಿದ್ದ ಕ್ಲಿನಿಕ್ ಗೆ ಧಾಳಿ ನಡೆಸಿ ಸರ್ಟಿಫಿಕೇಟು ದಾಖಲೆ ಸಹಿತ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಯಾವುದೇ ಶೈಕ್ಷಣಿಕ ಅರ್ಹತೆ ಹೊಂದದೇ ಅಲೋಪತಿ ಔಷಧ ನೀಡುತ್ತಿದ್ದರು. ಇಂತಹ ನಕಲಿ ಸರ್ಟಿಫಿಕೇಟ್ ಹೊಂದಿದ ನೂರಾರು ವೈದ್ಯರು ಗುಜರಾತಿನಲ್ಲಿರುವುದಾಗಿ ಪೋಲೀಸರು ಶಂಕೆ ಪ್ರಕಟಿಸಿದಾರೆ.