ಯಕ್ಷದೀವಿಗೆ ತುಮಕೂರು ಇದರ ದಶಮಾನೋತ್ಸವ ಗೌರವ ಸನ್ಮಾನ ತೆಂಕಣ ಯಕ್ಷಗಾನದ ಪ್ರಸಿದ್ಧ ವೇಷಭೂಷಣ, ಪ್ರಸಾದನ ಸಂಸ್ಥೆಯಾದ ಪೈವಳಿಕೆಯ ಗಣೇಶ ಕಲಾವೃಂದದ ಸಾರಥಿ ದೇವಕಾನ ಶ್ರೀ ಕೃಷ್ಣ ಭಟ್ ಅವರಿಗೆ ಸಲ್ಲಲಿದೆ.
ಡಿ.8ರಂದು ಭಾನುವಾರ ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀಕೃಷ್ಣ ಮಂದಿರದಲ್ಲಿ ನಡೆಯಲಿರುವ ಸಂಸ್ಥೆಯ ದಶಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಗೌ.ಸನ್ಮಾನ ನಡೆಯಲಿದೆ.
ತೆಂಕುತಿಟ್ಟು ಯಕ್ಷಗಾನಕ್ಕೆ ಕಳಂಕ ರಹಿತ ಶುಭ್ರ ಆಹಾರ್ಯ ಒದಗಿಸುತ್ತಿರುವ ” ದೇವಕಾನ ಸೆಟ್” ಎಂದೇ ಖ್ಯಾತವಾದ ಪೈವಳಿಕೆ ಗಣೇಶ ಕಲಾವೃಂದದ ಒಟ್ಟು ಕೊಡುಗೆ ಮಾನಿಸಿ ಈ ಗೌರವ ಸನ್ಮಾನ ಸಲ್ಲುತ್ತಿದೆ.
ತೆಂಕಣ ಯಕ್ಷಗಾನದ ವೇಷಭೂಷಣಕ್ಕೆ ಸಂಶೋಧನೀಯ ಪರಿಷ್ಕಾರದ, ಕಲಾ ಅನ್ವೇಷಣೆಯ ನವ ಆಯಾಮವನ್ನಿತ್ತ ದಿ.ದೇವಕಾನ ಕೃಷ್ಣ ಭಟ್ಟರ ಪುತ್ರನಾದ ಶ್ರೀಕೃಷ್ಣ ಭಟ್ ಅವರು ತಂದೆ ಉತ್ಕೃಷ್ಟವಾಗಿಸಿದ ತಮ್ಮ ಸಂಸ್ಥೆಯನ್ನು ಅದೇ ಆದರ್ಶ ಪಥದಲ್ಲಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಮಂಜೇಶ್ವರ ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿರುವ ಶ್ರೀಕೃಷ್ಣ ಭಟ್ ಹವ್ಯಾಸಿ ಕಲಾವಿದ, ಅರ್ಥದಾರಿ. ಯಕ್ಷಗಾನದ ವೇಷಭೂಷಣ ತಯಾರಿ ಮತ್ತು ಬಯಲಾಟಗಳಿಗೆ ಡ್ರೆಸ್ ಕೊಂಡೊಯ್ಯುವುದನ್ನೇ ನೋಡಿ ಬೆಳೆದ ಬಾಲ್ಯ ಅವರದ್ದು.
ತಂದೆಯ ಜತೆ ಈ ಕಸುಬಿನಲ್ಲಿ ತಾನೂ ಪಳಗಿ, ತಂದೆಯ ಮರಣೋತ್ತರ ಅದನ್ನು ಅಷ್ಟೇ ಕಾಳಜಿಯಿಂದ ಮುಂದುವರಿಸುತ್ತಿರುವ ಇವರ ಜತೆ ಈಗ 15ಮಂದಿ ಸಿಬ್ಬಂದಿಗಳಿದ್ದಾರೆ. ಏಕ ಕಾಲಕ್ಕೆ ನಾಲ್ಕೈದು ಬಯಲಾಟಕ್ಕೆ ವೇಷಭೂಷಣ ಒದಗಿಸುವ ಸಂಪನ್ನತೆ ಇದೆ. 100ಕ್ಕೂ ಅಧಿಕ ಕಲಾವಿದರಿದ್ದರೂ ಬೃಹತ್ ಯಕ್ಷೋತ್ಸವಕ್ಕೆ ಬೇಕಾದಷ್ಟೂ ವೇಷಭೂಷಣಗಳ ಸರಂಜಾಮು ಇದೆ. ಚೌಕಿ ಮನೆಯಲ್ಲಿ ಶಾಂತಿ, ಸಂಯಮದ ಶಿಸ್ತಿನಿಂದ ಹಿರಿಯರದ್ದಾಗಲೀ, ಕಿರಿಯರದ್ದಾಗಲೀ ಆಟಗಳಿದ್ದಲ್ಲಿ ದೇವಕಾನದ ಡ್ರೆಸ್ ಎಂದಾದರೆ ಸಂಘಟಕರಿಗೆ ನಿಶ್ಚಿಂತೆ.
ಈ ವ್ಯವಸ್ಥೆಯ ಹಿಂದೆ ಪರಿಣತ, ತಜ್ಞರುಗಳ ಸಾಂಘಿಕ ಕೊಡುಗೆ ಇದೆ. ಈ ಶ್ರೇಷ್ಠತೆಯ ಹಿರಿಮೆಯನ್ನು ನೂಲು ಕಡಿಯದಂತೆ ಕಾಪಾಡಿ ಮುನ್ನಡೆಸುವುದಕ್ಕೆ ಈಗ ಸನ್ಮಾನ ಸಲ್ಲುತ್ತಿದೆ. ಅಮ್ಮ ಪಾರ್ವತಿ, ಪತ್ನಿ ಸುನೀತ, ಮಗಳು ಸಿಂಧೂರ ಜತೆ ಶ್ರೀಕೃಷ್ಣ ಭಟ್ಟರು ದೇವಕಾನದಲ್ಲಿ ವಾಸಿಸುತ್ತಾರೆ.