ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆವ ಪಾಶವೀ ಕೃತ್ಯಕ್ಕೆ ಕಾಸರಗೋಡಿನಲ್ಲಿ ಹಿಂದೂ ಐಕ್ಯತೆಯ ಪ್ರತಿಭಟನೆ

ಓಟ್ ಬೇಂಕಿನಾಸೆಯಿಂದ ಹಿಂದುತ್ವವನ್ನು ಮಾರಿಕೊಳ್ಳದಿರಿ-ಹಿಂದೂ ದಮನಕ್ಕೆ ಐಕ್ಯತೆಯೊಂದೇ ಉತ್ತರ ಎಂದ ಪ್ರಮುಖ ಯತಿಗಳು

by Narayan Chambaltimar
  • ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆವ ಪಾಶವೀ ಕೃತ್ಯಕ್ಕೆ ಕಾಸರಗೋಡಿನಲ್ಲಿ ಹಿಂದೂ ಐಕ್ಯತೆಯ ಪ್ರತಿಭಟನೆ
  • ಓಟ್ ಬೇಂಕಿನಾಸೆಯಿಂದ ಹಿಂದುತ್ವವನ್ನು ಮಾರಿಕೊಳ್ಳದಿರಿ-ಹಿಂದೂ ದಮನಕ್ಕೆ ಐಕ್ಯತೆಯೊಂದೇ ಉತ್ತರ ಎಂದ ಪ್ರಮುಖ ಯತಿಗಳು

ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮತೀಯರಮೂಲಭೂತವಾದಿಗಳಿಂದ ಹಿಂದು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಅಮಾನುಷ ಕ್ರೌರ್ಯದ, ಹಿಂಸಾತ್ಮಕ ದೌರ್ಜನ್ಯ ಮತ್ತು ಸಾಧು ಸಂತರನ್ನೂ ಬಿಡದೆ ಜೈಲಿಗಟ್ಟುತ್ತಿರುವ ಪಾಶವೀ ಕೃತ್ಯಗಳನ್ನು ಖಂಡಿಸಿ ಕಾಸರಗೋಡಿನಲ್ಲಿಂದು ಹಿಂದೂ ಪ್ರತಿಭಟನೆ ನಡೆಯಿತು.
ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಲ್ಲಿ ವಿವಿಧ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂಘಟಿತವಾಗಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಾಡಿನ ಪ್ರಮುಖ ಯತಿಗಳು ಮುಕ್ತ ಕಂಠದಿಂದ ಹಿಂದೂ ಸಮಾಜದ ಐಕ್ಯತೆ ಅನಿವಾರ್ಯ,ಎಂದು ಕರೆ ನೀಡಿದರು.

ಬಾಂಗ್ಲಾ ಘಟನೆ ಕಂಡೂ ಕಾಣದಂತಿರುವವರ ಒಳಗುಟ್ಟೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಸಹಿತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ ಅಕ್ಷಮ್ಯವಾಗಿದೆ. ಭಾರತದ ನೆರೆ ರಾಷ್ಟ್ರವೊಂದು ಈ ರೀತಿಯ ಹಿಂದೂ ದಮನಕಾರಿ ದೌರ್ಜನ್ಯ ನಡೆಸುವಾಗ ಅದನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ವರ್ತಿಸುವುದರ ಒಳಗುಟ್ಟೇನು? ಕೇವಲ ಓಟ್ ಬ್ಯಾಂಕಿನಿಸೆಯಿಂದ ವರ್ತಿಸುವ ಇಂಥವರ ಬಗ್ಗೆ ಸಮಾಜ ಎಚ್ಚರದಲ್ಲಿರಬೇಕು. ಓಟಿಗಾಗಿ ಹಿಂದೂಗಳು ನಮ್ಮತನವನ್ನೇ ಮಾರಿಕೊಳ್ಳಬಾರದು. ಆದ್ದರಿಂದ ಹಿಂದೂ ಸಮಾಜದ ಸಂರಕ್ಷಣೆಗೆ ಹಿಂದೂ ಐಕ್ಯತೆಯೊಂದೇ ಪರಿಹಾರ ಎಂದು ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದಂಗಳು ನುಡಿದರು.

ದಿನಬೆಳಗಾದರೆ ಜಾಗತಿಕ ಶಾಂತಿ, ಸಾಮರಸ್ಯ, ಮಾನವತೆ ಎಂದು ಮಾತಾಡುವವರಿಗೆ ಬಾಂಗ್ಲಾದಲ್ಲಿ ನಡೆಯುತ್ತಿರುವುದು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ಇಂದು ಬಾಂಗ್ಲಾದಲ್ಲಿ ನಡೆಯುತ್ತಿರುವುದು ನಾಳೆ ಕೇರಳದಲ್ಲೂ ನಡೆಯಬಹುದು ಎಂಬ ಆತಂಕ ಪ್ರಕಟಿಸಿದರು.

ಕಾಸರಗೋಡು ಚಿನ್ಮಯಾ ಮಿಷನಿನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಸನಾತನ ಧರ್ಮೀಯರ ನಿಗ್ರಹಕ್ಕೆ ಜಾಗತಿಕ ಷಡ್ಯಂತ್ರ ನಡೆಯುತ್ತಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂ ದಮನಕಾರಿ ಪ್ರವೃತ್ತಿಗಳನ್ನು ಮುಖ್ಯ ವಾಹಿನಿಯ ಯಾವೊಂದು ಮಾಧ್ಯಮಗಳೂ ಸುದ್ದಿ ನೀಡದೇ ರಹಸ್ಯವಾಗಿಸುತ್ತದೆ. ಯಾಕೆ ಹೀಗೆ..? ಹಿಂದೂ ಯೋಚಿಸುವ ಕಾಲ ಬಂದಿದೆ. ಹಿಂದೂ ಸಾಧು ಸಂತರ ಮೇಲೆ ಆಕ್ರಮಣ, ಬಂಧನ, ಮಹಿಳೆಯರ ಅತ್ಯಾಚಾದ, ದರೋಡೆ ಸಹಿತ ಹಿಂದೂಗಳನ್ನು ನೆರೆ ರಾಷ್ಟ್ರವೊಂದು ಭೇಟೆಯಾಡುತ್ತಿರುವುದು ಭಾರತಕ್ಕೆ ಮುನ್ನೆಚ್ಚರಿಕೆಯಾಗಿದೆ. ಭಾರತ ಎಚ್ಚೆತ್ತು ಸರ್ಜಿಕಲ್ ಸ್ಟ್ರೈಕ್ ಮಾಡುವ ಕಾಲ ಸನ್ನಿಹಿತವಾಗಿದೆಯೆಂದವರು ನುಡಿದರು.

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಬಾಂಗ್ಲಾ ದೇಶದಲ್ಲಿ ಮೂಲಭೂತವಾದಿಗಳ ತಾಂಡವ ನಡೆಯುತ್ತಿರುವಾಗ ಜಾಗತಿಕ ಹಿಂದೂಗಳ ಬೆಂಬಲಕ್ಕೆ ನಿಲ್ಲಬೇಕಾದುದು ನಮ್ಮ ಧರ್ಮ. ಅಲ್ಲಿ ನಡೆವ ಪಾಶವೀ ಕೃತ್ಯಗಳು ಖಂಡನೀಯ. ಈ ಹಿನ್ನೆಲೆಯಲ್ಲಿ ಭಾರತೀಯ ಹಿಂದೂಗಳು ಎಚ್ಚರದಿಂದ ಜಾಗೃತವಾಗಲೇಬೇಕು ಎಂದರು. ಸದ್ಗುರು ಶ್ರೀಮಾತಾ ಅಮೃತಾನಂದಮಯಿ ಕಾಸರಗೋಡು ಶಾಖಾ ಮಠದ ಶ್ರೀ ವೇದವೇದಾಮೃತ ಚೈತನ್ಯ ಅವರು ಮಾತನಾಡಿ ಹಿಂದೂ ಸಮಾಜ ಜೇನುನೊಣದಂತಾಗಬೇಕೆಂದರು. ಸಿಹಿ ಉಣಿಸುವ ಜೇನುಗೂಡಿಗೆ ಕಲ್ಲೆಸೆದರೆ ಜೇನುಗಳು ಬೆನ್ನಟ್ಟಿ ತಿರುಗೇಟು ಕೊಡುವಂತೆ ಹಿಂದೂ ಸಮಾಜ ಜಾಗೃತ ಸಂಘಟನೆಯಾಗಬೇಕೆಂದರು.

ಆರ್.ಎಸ್.ಎಸ್.ಕೇರಳ ಘಟಕದ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೆ.ಪಿ.ರಾಧಾಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ಹಿಂದೂ ಐಕ್ಯ ವೇದಿಕೆ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿ.ಹಿಂ.ಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಹಿರಿಯ ಆರ್.ಎಸ್.ಎಸ್ ಮುತ್ಸದ್ದಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಹಿತ ವಿವಿಧ ಸಂಘಟನೆಗಳ ನೂರಾರು ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00