ಕುಂಬ್ಳೆ ಪರಿಸರದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ರಂಗದಲ್ಲಿ ಸಕ್ರಿಯರಾಗಿ ಜನಮಾನಸದ ಒಲವುಗೆದ್ದ ಅಜಾತಶತ್ರು ಮಡ್ವ ಮಂಜುನಾಥ ಆಳ್ವರನ್ನೀಗ ಅಂಗೀಕಾರ ಗೌರವಗಳು ಅರಸಿ ಬರಲಾರಂಭಿಸಿದೆ. ಗಡಿನಾಡ ಸಾಂಸ್ಕೃತಿಕ ಅಕಾಡೆಮಿ ತಿರುವನಂತಪುರದಲ್ಲಿ ನಡೆಸಿದ ಅನಂತಪುರಿ ಉತ್ಸವದಲ್ಲಿ ಅವರಿಗೆ ಪ್ರಶಸ್ತಿ ಇತ್ತು ಗೌರವಿಸಿರುವುದು ಅವರ ಆತ್ಮೀಯರಲ್ಲಿ ಅಭಿಮಾನ ಮೂಡಿಸಿದೆ.
ಸರಳತೆಯಿಂದ ಜನರ ನಡುವೆ ಬೆರೆತು ಬಾಳುವ ಮಂಜುನಾಥ ಆಳ್ವರು ರಾಜಕೀಯದ ರಾಗಧ್ವೇಷಗಳನ್ನು ಮೀರಿ ನಿಂತವರು. ರಾಜಕೀಯಾತೀತ ಜನಬೆಂಬಲದ ಒಲವು ಪಡೆದವರು. ದೈವಸ್ಥಾನ, ದೈವಸ್ಥಾನ, ಮಂದಿರವೇ ಮೊದಲಾದುವುಗಳ ಬ್ರಹ್ಮಕಲಶ ನಡೆಯುವ ಸಂದರ್ಭ ಬಂದರೆ ಸಂಘಟನಾ ಸಾಮರ್ಥ್ಯದಿಂದ ಮುಂಚೂಣಿಯಲ್ಲಿ ಇವರ,ಹೆಸರು ಉಲ್ಲೇಖವಾಗುತ್ತದೆ.
ಕುತ್ತಿಕಾರ್ ಯಜಮಾನ ದಿ.ರಾಮಯ್ಯ ಆಳ್ವ ಮತ್ತು ಅಡ್ಯಾರ್ ಗುತ್ತು ದಿ.ಶಾಂಭವಿ ಆಳ್ವರ ಐವರು ಮಕ್ಕಳಲ್ಲಿ ಮಂಜುನಾಥ ಆಳ್ವರು ತೃತೀಯ ಪುತ್ರ. 1952ರ ಜುಲೈ 1ರಂದು ಜನಿಸಿದ್ದ ಅವರಿಗೀಗ 72ರ ಹರೆಯ. ಉನ್ನತ ಶಿಕ್ಷಣ ಪಡೆದಿದ್ದರೂ ಪಾರಂಪರಿಕವಾದ ಕೃಷಿಯಲ್ಲೇ ಮುಂದುವರಿದು, ಜತೆಯಲ್ಲೇ ಸಾಮಾಜಿಕ, ರಾಜಕೀಯ ರಂಗದಲ್ಲಿ ಸಕ್ರಿಯರಾದ ಇವರು ಕುಂಬಳೆ ಗ್ರಾ.ಪಂನ ಉಪಾಧ್ಯಕ್ಷ, ಎರಡು ಬಾರಿಗೆ ಸದಸ್ಯರಾಗಿದ್ದರು. ಯು.ಡಿ.ಎಫ್ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ನಾಯಕನಾದರೂ ಅವರದ್ದು ಧಾರ್ಮಿಕ ನಿಷ್ಠ ಕೈಂಕರ್ಯ. ಕಣಿಪುರ ಗೋಪಾಲಕೃಷ್ಣ ದೇವಸ್ಥಾನ ಪರಿಸರದಲ್ಲಿ ತನ್ನದೇ ಮಿತ್ರವೃಂದ ಹೊಂದಿರುವ ಇವರು 2024ರಲ್ಲಿ ನಡೆದ ಕಣಿಪುರ ಬ್ರಹ್ಮಕಲಶೋತ್ಸವದ ಯಶಸ್ಸಿನ ರೂವಾರಿಗಳಲ್ಲೊಬ್ಬರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಖ್ಯ ಪ್ರತಿನಿಧಿಯಾಗಿ ಹತ್ತಾರು ಬ್ರಹ್ಮಕಲಶ, ಜನಪರ ಹೋರಾಟಗಳಲ್ಲಿ ಸಾಮಾಜಿಕ ನಾಯಕರಾಗಿ ಕಳೆದ 6ದಶಕಗಳಿಂದ ಕುಂಬಳೆ ಪರಿಸರದ ಜಾತ್ಯಾತೀತ ನಾಯಕರಾಗಿ ಜನರಿಂದ ಪ್ರೀತಿ ಪಡೆದಿರುವ ಮಂಜುನಾಥ ಆಳ್ವರು ಎಲ್ಲೂ ವೇದಿಕೆಯ ಸ್ಥಾನ,ಮಾನ, ಸನ್ಮಾನಕ್ಕೆ ಕೊರಳೊಡ್ಡುತ್ತಾ ನಡೆದವರಲ್ಲ. ಇವರಿಗೆ ಗೌರವದ ಪ್ರಶಸ್ತಿ ಸಂದಿರುವುದು ಅರ್ಹತೆಗೊಲಿದ ಅಂಗೀಕಾರ ಎಂದು ಅವರ ಅಭಿಮಾನಿಗಳು ಹರ್ಷಿಸುತ್ತಿದ್ದಾರೆ.