- ತೆಂಕಣ ಯಕ್ಷಗಾನದ ತವರೂರು ಕುಂಬಳೆಯ ಹೆಸರು ಮೆರೆಸಿದ ಕಲಾವಿದ ದಿ. ಕುಂಬ್ಳೆ ಶ್ರೀಧರ ರಾಯರ 62 ವರ್ಷದ ಕಲಾಯಾನದ ಕನಸು ನನಸಾಗುತ್ತಿದೆ..
- ಪಾರ್ತಿಸುಬ್ಬನ ಮಣ್ಣಿನಲ್ಲೇ ನನ್ನ ಅಭಿನಂಧನಾ ಸಮಾರಂಭ ನಡೆಯಬೇಕೆಂದು ಬಯಸಿದ್ದವರ ಪಾಲಿಗೆ 2024ನೇ ವರ್ಷದ ಕ್ಯಾಲಂಡರ್ ವರ್ಷ ಮುಗಿಯುವ ಮುನ್ನ ಬಯಸಿದ ತಾಣದಲ್ಲೇ ಅಭಿನಂದನೆಯ ಬದಲು ಸಂಸ್ಮರಣಾ ಗ್ರಂಥ ಬಿಡುಗಡೆಯಾಗುತ್ತಿದೆ…
ಇದು ಕಾಕತಾಳೀಯ - ಪಾರ್ತಿಸುಬ್ಬನ ಮಣ್ಣನ್ನು ಮೆರೆಸಿದ ಕಲಾವಿದನೊಬ್ಬನಿಗೆ ಅದೇ ನೆಲದಲ್ಲಿ ಸೀಮಾಗೌರವ ಸಲ್ಲುವ ಅಪರೂಪದ ಕಲಾ ಸಂಭ್ರಮಕ್ಕೆ ಇನ್ನು ಕೇವಲ ಇಪ್ಪತ್ತೊಂಭತ್ತೇ ದಿನಗಳು..!
ಕಣಿಪುರ ಕ್ಷೇತ್ರ ಎಂದರೆ ಗತಕಾಲದ ಯಕ್ಷಗಾನದ ಆಡುಂಬೊಲ. ವರ್ತಮಾನದಲ್ಲೀಗ ಈ ನೆಲದಲ್ಲಿ ಯಕ್ಷಗಾನ ಕಲಾಗೌರವದ ಆದರಾಭಿಮಾನ ಕ್ಷೀಣಿಸಿದರೂ, ಈ ನೆಲದ ಹೆಸರನ್ನು ಯಕ್ಷಬಾಂದಳದಲ್ಲಿ ಮೆರೆಸಿದ ಕಲಾವಿದನಿಗೆ ಅದೇ ನೆಲದಲ್ಲಿ ಅಂತಿಮ ಕಲಾಗೌರವ ಸಲ್ಲುತ್ತಿರುವುದೊಂದು ಇತಿಹಾಸ. ಇದು ಸಾಂಸ್ಕೃತಿಕ ಚರಿತ್ರೆಯಲ್ಲಿ ಉಲ್ಲೇಖವಾಗುವ ಸಂಭ್ರಮ…
1962ರಲ್ಲಿ ಕುಂಬಳೆ ಗಾಂಧಿ ಮೈದಾನದಿಂದ ಕುಂಡಾವು ಮೇಳದ ಲಾರಿ ಹತ್ತಿದ ನಾಯ್ಕಾಪಿನ ಹುಡುಗ ಆ ಬಳಿಕ ಮೂಲ್ಕಿ, ಕರ್ನಾಟಕ, ಕೂಡ್ಳು, ಧರ್ಮಸ್ಥಳವೇ ಮೊದಲಾದ ಮೇಳಗಳಲ್ಲಿ ಭರ್ತಿ 62ವರ್ಷ ತಿರುಗಾಟಗೈದು ಕುಂಬ್ಳೆ ಶ್ರೀಧರ ರಾವ್ ಎಂಬ ಹೆಸರನ್ನು ಕಲಾವಿದನಾಗಿ ಮುದ್ರೆಯೊತ್ತಿದ್ದು ತೆಂಕಣ ಯಕ್ಷಗಾನದ ತವರಿನ ನಿನ್ನೆಗಳ ಇತಿಹಾಸ…
ಎಲ್ಲಿ ಕಲಾಯಾನದ ಸಂಭ್ರಮ ಆಚರಿಸಬೇಕೆಂದು ಬಯಸಿದ್ದರೋ ಅದೇ ನೆಲದಲ್ಲೀಗ ಅವರಿಲ್ಲದ ಮೇಲೆ ಕಲಾಶ್ರೀಧರನ ಮೆಲುಕು ನಡೆಯಲಿದೆ. ಅಭಿನಂಧನೆಯ ಗ್ರಂಥ ಸಂಸ್ಮರಣೆಯ ನುಡಿನಮನವಾಗಲಿದೆ. ಪಾರ್ತಿಸುಬ್ಬನ ತವರೂರ ಮಣ್ಣಿನಲ್ಲಿ ಮಣ್ಣಿನ ಮಗನಾದ ಕಲಾವಿದರಿಗೆ ಇಂಥ ನೆಲದ ಗೌರವ ಸಲ್ಲುವುದು ಇದೇ ಮೊದಲು, ಅದೇ ಕಲಾಶ್ರೀಧರನ ಮೆಲುಕಿನ ಸಗೌರವ…
ಡಿ 29ರಂದು ಶ್ರೀಧರ ಸಂಭ್ರಮ
ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ನವೀಕರಣ ಬ್ರಹ್ಮಕಲಶ ನಡೆದು , ಈ ವರ್ಷದ ಕ್ಯಾಲೆಂಡರ್ ಬದಲಾಗುವ ಮುನ್ನ ಡಿ.29ರಂದು ನಡೆಯುವುದೇ ಕುಂಬ್ಳೆ ಶ್ರೀಧರರಾವ್ ಮೆಲುಕಿನ ಸಂಭ್ರಮ..
ಕಣಿಪುರ ಕ್ಷೇತ್ರದಲ್ಲಿದು ಈ ವರ್ಷದ ಕೊನೇಯ ಕಾರ್ಯಕ್ರಮ.
ಬೆಳಿಗ್ಗೆ 9ಕ್ಕೆ ಸನಾತನ ಸಂಪ್ರದಾಯಿಕ ಉದ್ಘಾಟನೆ ಪಡೆದು ನಾಂದಿಯಾಗುವ ಕಾರ್ಯಕ್ರಮದಲ್ಲಿ 9.30ರಿಂದ ಕುಂಬ್ಳೆ ಶ್ರೀಧರ ರಾವ್ ಕಲಾವಿದನಾಗಿ ರಂಗದಲ್ಲಿ ಮೆರೆಸಿದ ಪ್ರಧಾನ ಪಾತ್ರಗಳ ಪುನರ್ ನೆನವರಿಕೆಯಾಗಲಿದೆ.
ಮುಮ್ಮೇಳದ ಪಾತ್ರಗಳಲ್ಲಿ ಪ್ರಬುದ್ಧ ಕಲಾವಿದರಾದ ಸುಣ್ಣಂಬಳ, ಸೂರಂಬೈಲು, ಶಂಭುಶರ್ಮ, ಗೇರುಕಟ್ಟೆ ದಿವಾಕರ ಆಚಾರ್ಯರು ಪಾತ್ರ ತೊಟ್ಟರೆ ಹಿಮ್ಮೇಳದಲ್ಲಿ ಅಮ್ಮಣ್ಣಾಯ, ಪುತ್ತಿಗೆ, ಮಯ್ಯ ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಲಕ್ಷ್ಮೀಷ ಅಮ್ಮಣ್ಣಾಯ, ಜಗನ್ನಿವಾಸರಾವ್, ರಾಂಮೂರ್ತಿ ಕುದ್ರೆಕೋಡ್ಳು, ಲವ ಐಲ ಭಾಗವಹಿಸುವರು
ಮಧ್ಯಾಹ್ನ ತಾಳಮದ್ದಳೆ, ಸಂಜೆ ಗ್ರಂಥ ಅನಾವರಣ
ಮಧ್ಯಾಹ್ನ 1ರಿಂದ ಪ್ರಸಿದ್ಧ ಕಲಾವಿದರಿಂದ ಕೃಷ್ಣ ಸಂಧಾನ ತಾಳಮದ್ದಳೆ ನಡೆಯಲಿದೆ.
ಅರ್ಥದಾರಿಗಳಾಗಿ ಡಾ.ಜೋಷಿ, ಉಜಿರೆ, ಕುಂಬ್ಳೆ ಪಾಲ್ಗೊಂಡರೆ ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರು ಕಾಣಿಸಿಕೊಂಡು ಶ್ರೀಧರ ನಮನ ಸಲ್ಲಿಸುವರು.
ಸಂಜೆ 4ಕ್ಕೆ ಕುಂಬ್ಳೆ ಶ್ರೀಧರ ರಾಯರ ಸಂಸ್ಮರಣಾಗ್ರಂಥ “ಕಲಾಶ್ರೀಧರ ” ಅನಾವರಣವಾಗಲಿದೆ.
ಶ್ರೀಮದೆಡನೀರು ಮಠದ ಶ್ರೀಸಚ್ಛಿದಾನಂದ ಭಾರತಿ ಶ್ರೀಪಾದಂಗಳವರು ದಿವ್ಯ ಉಪಸ್ಥಿತಿಯ ಆಶೀರ್ವಚನ ನೀಡಿದರೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಕೃತಿ ಬಿಡುಗಡೆ ಮಾಡುವರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶಾಂಭಟ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳುವರು.
ಹಿರಿಯ ಪತ್ರಕರ್ತ, ಲೇಖಕ ನಾ.ಕಾರಂತ ಪೆರಾಜೆ ಸಂಪಾದಕತ್ವದಲ್ಲಿ ಸ್ಮರಣ ಸಂಚಿಕೆ ರೂಪುಗೊಂಡಿದ್ದು , ಅವರು ಕೃತಿಯ ಕುರಿತು ಮಾತನ್ನಾಡುವರು.
ಬಳಿಕ ಮಾಣಿಲ ಮೇಳದವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಜರಗಲಿದೆ.
.