ದೆಹಲಿ: ಕಾಸರಗೋಡು ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪುರೋಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಅದರಿಂದುಂಟಾಗುವ ಸಮಸ್ಯೆಗಳ ಕುರಿತಾಗಿ ಜನರಿತ್ತ ದೂರನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ
ಲಿಖಿತ ಮನವಿ ಮೂಲಕ ತಿಳಿಸಿ ಚರ್ಚೆ ನಡೆಸಿರುವುದಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಮಂಜೇಶ್ವರ, ಕಾಸರಗೋಡು, ಚೆರ್ಕಳ, ಕಾಞಂಗಾಡ್, ಪಡನ್ನಕಾಡ್, ನೀಲೇಶ್ವರಂ, ಪಯ್ಯನ್ನೂರ್, ಪಿಲಾತ್ತರ, ಕಲ್ಯಾಶೇರಿ ಮೊದಲಾದ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಯ ಆತಂಕಿತ ದೂರುಗಳನ್ನು ಕ್ರೋಢೀಕರಿಸಿ ಕೇಂದ್ರ ಸಚಿವರ ಗಮನಕ್ಕೆ ತಂದಿರುವುದಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಈ ಕುರಿತು ವಿವಿಧ ಪಂಚಾಯತ್ ಸಮಿತಿ, ಶಾಸಕರು, ಜನಪ್ರತಿನಿಧಿಗಳು, ಸಾಮಾಜಿಕ ಸಂಘಸಂಸ್ಥೆಗಳು ತನಗೆ ನೀಡಿದ ದೂರುಗಳನ್ನೆಲ್ಲಾ ಕ್ರೋಢೀಕರಿಸಿ ಈ ಮನವಿ ತಯಾರಿಸಲಾಗಿದೆಯೆಂದೂ , ಕೇಂದ್ರ ಸಚಿವರು ಜನರ ಬೇಡಿಕೆಗಳನ್ನು ಪುರಸ್ಕರಿಸುವ ಭರವಸೆ ಇತ್ತಿದ್ದಾರೆಂದೂ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಮುಂದುವರಿಯುತ್ತಿದ್ದು ಹಲವು ಕಡೆ ಅಂಡರ್ ಪಾಸ್, ಮೇಲ್ಸೇತುವೆಗಳು ಬೇಕೆಂದು ನಾಗರಿಕರು ಆಗ್ರಹಿಸಿ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭಗಳಲ್ಲಿ ನಾಗರಿಕರು ಸಂಸದರಿಗೆ ನೀಡಿದ್ದ ಮನವಿಯನ್ನು ಇದೀಗ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.