ಎಳೆಯ ಹರೆಯದಿಂದ’ಲೇ ಟೇಕ್ವಾಂಡೋ ಸಮರಕಲೆಯಲ್ಲಿ ಅಸಾಮಾನ್ಯ ಸಾಧನೆ ಮೆರೆದು, ಚಿನ್ನದ ಪದಕಗಳನ್ನು ಗೆಲ್ಲುತ್ತಲೇ ನಡೆದ ಏಳರ ಹರೆಯದ ಗಡಿನಾಡ ಬಾಲೆ ಇದೀಗ ತನ್ನ ಸಾಧನೆಗೆ ಅಂಗೀಕಾರವಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ -2024ರ ದಾಖಲೆಗೆ ಸೇರಿದ್ದಾಳೆ.
ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಪ್ರದರ್ಶನದಲ್ಲಿ ಧನುರ್ ಆಸನವನ್ನು 30ಸೆಕೆಂಡಿನಲ್ಲಿ 30ರೋಲ್ ಮಾಡುವ ಮೂಲಕ ಈ ಬಾಲೆ ಇಂಡಿಯನ್ ಬುಕ್ ಆಫ್ ರೆಕಾರ್ಡಿಗೆ ಸೇರಲ್ಪಟ್ಟಳು.
1940 -50ರ ನಡುವೆ ಚೀನೀ ಸಮರಕಲೆಗಳಲ್ಲಿ ಪರಿಣಿತರಾದ ಕೊರಿಯನ್ ಸಮರಕಲೆಯ ಅನುಭವಿಗಳು
ವಿನ್ಯಾಸ ಮಾಡಿದ ಸಮರಕಲೆ ಇದಾಗಿದೆ.
ಉಳಿಯತ್ತಡ್ಕ ಜೈಮಾತಾ ಸೀನಿಯರ್ ಸೆಕಂಡರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಟೀಕೊಂಡೊ ಕರಾಟೆ ಮಿಶ್ರಿತ ಸಮರಕಲೆಯಲ್ಲಿ ಈಗಾಗಲೇ ಎರಡು ಸಲ ಚಿನ್ನದ ಪದಕ ಸಹಿತ ಜಿಲ್ಲಾಮಟ್ಟದ ಬಹುಮಾನಕ್ಕೆ ಅರ್ಹಳಾಗಿದ್ದಾಳೆ.
2022, 23 ರಲ್ಲಿ ಮಲಪ್ಪುರಂ ನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ಚಿನ್ನದ ಪದಕ, ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಚಿನ್ನದಪದಕ, 2023ರಲ್ಲಿ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ಮುಡಿದು ಸಾಧನೆ ಮೆರೆದ ಬಾಲಕಿ ಕಾಸರಗೋಡು ಮನ್ನಿಪ್ಪಾಡಿಯ ಜಯಚಂದ್ರ ಗಟ್ಟಿ, ವಿನುತಾ,ಗಟ್ಟಿ ದಂಪತಿಯರ ಪುತ್ರಿ.
ಕೇರಳದ ಫ್ಲವರ್ಸ್ ಟಿ.ವಿ.ಯ ಕೋಮಡಿ ಉತ್ಸವಂ ದಲ್ಲಿ ಪಾಲ್ಗೊಂಡು ಜನಪ್ರಿಯಳಾದ ಈ ಬಾಲಪ್ರತಿಭೆ ನಮ್ಮ ಕುಡ್ಳ ಚಾನೆಲ್ ನಡೆಸಿದ ಡ್ಯಾನ್ಸ್ ಫೆಸ್ಟ್ ನಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾಳೆ.