- ಕಳೆದ ಕಾಲದ ಬಡತನದ ಬೇಗುದಿಯಲ್ಲಿ ನೊಂದು,ಬೆಂದು ಯಕ್ಷಗಾನ ಸೇವೆಗೈದ ಕಾಸರಗೋಡು ತಾಲೂಕಿನ 27ಮಂದಿ ಯಕ್ಷಗಾನ ಕಲಾವಿದರನ್ನು ಕೇರಳ ತುಳು ಅಕಾಡೆಮಿ ಗೌರವಿಸಿದೆ. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನ.24ರಂದು ನಡೆದ ಸಮಾರಂಭದಲ್ಲಿ ಗಡಿನಾಡಿನ ಸಾಧಕರಾದ ಯಕ್ಷಗಾನ ಕಲಾವಿದರಿಗೆ ಅಕಾಡೆಮಿ ಗೌರವಾರ್ಪಣೆ ನಡೆಯಿತು.
ಗಡಿನಾಡ ಯಕ್ಷಗಾನ ಕಲಾವಿದರಿಗೂ ಮಾಸಾಶನ ಸಿಗಬೇಕು-ಶಾಸಕ ಕುಂಞ್ಞಂಬು
ಸಾಂಸ್ಕೃತಿಕ ಸಂಪನ್ನವಾದ ಕಾಸರಗೋಡಿನ ಶ್ರೀಮಂತಿಕೆಯೇ ಯಕ್ಷಗಾನ. ಈ ಕಲೆಯ ಉನ್ನತಿಗಾಗಿ ಕೊಡುಗೆ ಸಲ್ಲಿಸಿದ ಕಲಾವಿದರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ನಾಡಿಗೆ ಅಭಿಮಾನ. ನಾಡು ಬೆಳಗಿಸಿದ ಕಲಾವಿದರಲ್ಲಿ ಯಾವುದೇ ಹತಾಶೆ ಬೇಡ. ಯಕ್ಷಗಾನ ಸಹಿತ ಎಲ್ಲಾ ವಲಯದ ಕಲಾವಿದರಿಗೂ ಮುಪ್ಪಿನಲ್ಲಿ ಸರಕಾರದ ಮಾಸಿಕ ಪಿಂಚಣಿ ಇದೆ. ಯಕ್ಷಗಾನ ವಲಯಕ್ಕೂ ಅದು ತಲುಪಬೇಕಾಗಿದೆ ಎಂದು ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿದ, ಕೇರಳ ತುಳು ಅಕಾಡೆಮಿ ಸ್ಥಾಪಕರಾದ ಶಾಸಕ
ಸಿ.ಎಚ್.ಕುಂಞ್ಞಂಬು ನುಡಿದರು.
ಒಂದು ನಾಡಿನಲ್ಲಿ ಸಾಮರಸ್ಯದ ಸಾಹೋದರ್ಯದ ಸಸ್ನೇಹದ ಸಹಬಾಳ್ವೆ ರೂಪಿಸುವಲ್ಲಿ ಕಲಾವಿದರ ಕೊಡುಗೆ ದೊಡ್ಡದು. ಕಲೆಯ ಮೂಲಕ ಅದನ್ನು ಮಾಡುತ್ತಲೇ ಬಂದ ಕಲಾವಿದರು ಅಭಿನಂದನೀಯರು ಎಂದವರು ಹೇಳಿದರು.
ಮಂಜೇಶ್ವರ ಸಾಮರಸ್ಯದ ಭಾವಭೂಮಿಯಾಗಲಿ-ಕೊಂಡೆವೂರು ಶ್ರೀ
ಸಮಾರಂಭಕ್ಕೆ ಅತಿಥೇಯತ್ವ ವಹಿಸಿದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಎಡನೀರು ಮಠಾಧೀಶ ಶೀ ಸಚ್ಛಿದಾನಂದ ಭಾರತಿ ಸ್ವಾಮೀಜಿಗಳವರು ಆಶೀರ್ವಚನಗಳನ್ನಿತ್ತರು.
ಮಂಜೇಶ್ವರ ಎಂದರೆ ಇಂದೀಗ ಸ್ಥಿತ್ಯಂತರ ಕಂಡರೂ ಒಂದು ಕಾಲದಲ್ಲಿದು ಸಾಂಸ್ಕೃತಿಕ,ಸಾಹಿತ್ಯದ ಸಂಪನ್ನ ಭೂಮಿಯಾಗಿತ್ತು. ಅದರ ಬಳುವಳಿಯಾಗಿ ಈ ನೆಲ ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿಗಳಿಂದ ಸಾಮರಸ್ಯದ ಭಾವಭೂಮಿಯಾಗಬೇಕು. ಆಗಮಾತ್ರವೇ ನಾಡು ಬೆಳಗುತ್ತದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗಡಿನಾಡಿಗೆ ಸಾಂಸ್ಕೃತಿಕ ಫಂಡಿಲ್ಲ-ಶಾಸಕ ಎಕೆಎಂ
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿ “ಕಾಸರಗೋಡು ಪ್ರದೇಶದಲ್ಲಿ ಅಭ್ಯುದಯದ ಕೆಲಸಗಳನೇಕ ಬಾಕಿ ಇದೆ. ಕೇರಳದ ತೆಂಕಣ ಜಿಲ್ಲೆಗಳಿಗಿತ್ತ ಪ್ರಾಶಸ್ತ್ಯ ನಮ್ಮ ಗಡಿನಾಡಿನ ತುಳು ಪ್ರದೇಶಕ್ಕೆ ಕಾಲಕಾಲಗಳಿಂದ ಸರಕಾರಗಳು ನೀಡುತ್ತಿಲ್ಲ. ಈ ವಿವೇಚನೆಗಳಿಂದ ಸಾಂಸ್ಕೃತಿಕ ಫಂಡ್ ಎಂಬುದು ನಮ್ಮ ನಾಡಿಗೆ ಮರೀಚಿಕೆಯಾಗಿದೆ ಎಂದರು.
ಯಕ್ಷಗಾನ ಕಲಾವಿದರನ್ನು ಗೌರವಿಸುವ ಮೂಲಕ ತುಳು ಅಕಾಡೆಮಿ ಸಾಂಸ್ಕೃತಿಕ ಮಹತ್ವಿಕೆಯ ಕೆಲಸ ಮಾಡಿದೆ ಎಂದವರು ಶ್ಲಾಘಿಸಿದರು.
27 ಮಂದಿ ಕಲಾವಿದರಿಗೆ ಕೇರಳ ಅಕಾಡೆಮಿಯ ಗೌರವ
ಹಿರಿಯ ಯಕ್ಷಗಾನ ಪ್ರಸಂಗಕರ್ತರಾದ ಮಧೂರು ವೆಂಕಟಕೃಷ್ಣ, ಶೇಡಿಗುಮ್ಮೆ ವಾಸುದೇವ ಭಟ್ ಕುಂಬಳೆ, ಬೆಳ್ಳಿಗೆ ನಾರಾಯಣ ಮಣಿಯಾಣಿ, ಚರ್ಮ ವಾದ್ಯ ತಯಾರಕ ಕೂಡ್ಳು ಸದಾನಂದ ರಾವ್, ಹಿರಿಯ ವೇಷಧಾರಿ ಬಾಯಾರು ರಘುನಾಥ ಶೆಟ್ಟಿ, ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ವೇಷಧಾರಿ ಮಾನ್ಯ ನಾರಾಯಣ ಮಣಿಯಾಣಿ, ಯಕ್ಷಗಾನ ಗುರು ಸಬ್ಬಣಕೋಡಿ ರಾಮಭಟ್, ಯಕ್ಷಗಾನ ಮೇಳ ಸಂಚಾಲಕ ಐತ್ತಪ್ಪ ವರ್ಕಾಡಿ, ಪ್ರಸಾದನ ಕಲಾವಿದ ಪೈವಳಿಕೆ ರಾಧಾಕೃಷ್ಣ ಮಾಸ್ತರ್, ಗೊಂಬೆಯಾಟದ ಕೆ.ವಿ.ರಮೇಶ ಕಾಸರಗೋಡು, ರಾಮ ಸಾಲ್ಯಾನ್ ಮಂಗಲ್ಪಾಡಿ, ಭಾಗವತ ಪಾರೆಕೋಡಿ ಗಣಪತಿ ಭಟ್, ಹಿರಿಯ ಯಕ್ಷಗಾನ ವೇಷಭೂಷಣ ತಯಾರಕ ಐತ್ತಪ್ಪ ಟೈಲರ್ ಕೊಡಂಗೆ, ವೇಷಧಾರಿ ಬಾಲಕೃಷ್ಣ ಗೌಡ ದೇಲಂಪಾಡಿ, ನಾರಾಯಣ ಶೆಟ್ಟಿ ಪರಪ್ಪು, ಸಂಜೀವ ಶೆಟ್ಟಿ ಚೇಟ್ಲ, ಮೊಹಮ್ಮದ್ ಆರ್ಲಪದವು, ಸರವು ರಮೇಶ ಭಟ್ ಬಾಯಾರು, ರಾಮಜೋಗಿ ಜೋಡುಕಲ್ಲು, ಭಾಸ್ಕರ ಕೋಳ್ಯೂರು, ತಿಮ್ಮಪ್ಪ ರೈ ಮಡಂದೂರು, ದಿವಾಣ ಶಿವಶಂಕರ ಭಟ್, ನಾರಾಯಣ ಪೂಜಾರಿ ಬೆಜ್ಜಂಗಳ, ಶುಭಾನಂದ ಶೆಟ್ಟಿ ಕುಳೂರು, ಅಡೂರು ಮೋಹನ ಸರಳಾಯ, ನೇಪಥ್ಯ ಕಲಾವಿದ ಈಶ್ವರ ನಾಯ್ಕ ಅಡ್ಕಸ್ಥಳ ಎಂಬಿವರನ್ನು ಗೌರವ ಸನ್ಮಾನದಿಂದ ಉಭಯಶ್ರೀಗಳ ಸಮ್ಮುಖ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ, ಕವಿ, ಅರ್ಥದಾರಿ ಡಾ. ರಮಾನಂದ ಬನಾರಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ ರೈ ಮಾಸ್ತರ್, ಪತ್ರಕರ್ತ, ಲೇಖಕ ಎಂ ನಾ.ಚಂಬಲ್ತಿಮಾರ್, ಪಾರ್ತಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಡಿ.ಬೂಬ, ಪ್ರಸಂಗಕರ್ತ,ಸಾಹಿತಿ ಯೋಗೀಶ್ ರಾವ್ ಚಿಗುರುಪಾದೆ, ತುಳು ಸಾಹಿತಿ ಕುಶಾಲಾಕ್ಷಿ ವಿ.ಕಣ್ವತೀರ್ಥ ಅತಿಥಿಗಳಾಗಿ ಪಾಲ್ಗೊಂಡರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶುಭಾನಂದ ಶೆಟ್ಟಿ ಬಳಗದವರು ಪ್ರಾರ್ಥನೆ ಹಾಡಿದರು. ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು.