- ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳ ವಾಹನ ಆಕ್ರಮಿಸಿ, ಸಂಚಾರಕ್ಕೆ ತಡೆಯೊಡ್ಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದೇ ಕಾಲ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದ ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ, ಕೇರಳ, ತಮಿಳುನಾಡು ಘಟಕದ ಯತಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನ.25ರಂದು ಬೆಳಿಗ್ಗೆ ಎಡನೀರು ಮಠದಲ್ಲಿ ಶ್ರೀಸಚ್ಛಿದಾನಂದ ಭಾರತೀ ಶ್ರೀಪಾದರ ಸಮಕ್ಷಮ ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಂಡ ಸಂತ ಸಮಿತಿ ಅಪರಾಹ್ನ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಇಂಬುಸೇಕರನ್ ಅವರಿಗೆ ಮನವಿ ಸಲ್ಲಿಸಿದರು.
ಸ್ವಾಮೀಜಿ ವಾಹನ ಆಕ್ರಮಿಸಿದ ಆರೋಪಿಯನ್ನು ಬಂಧಿಸದೇ, ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸದೇ ಇರುವುದನ್ನು ಸಂತರ ಸಮಿತಿಯೇ ಪ್ರಶ್ನಿಸಿ, ಸ್ವಾಮೀಜಿಯವರ ತಂಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರಿತ್ತದ್ದು ಕಾಸರಗೋಡಲ್ಲಿ ಇದೇ ಮೊದಲು.
ಜಿಲ್ಲಾಧಿಕಾರಿ ಕಛೇರಿಗೆ ತೆರಳಿದ ಸಂತರ ನಿಯೋಗದಲ್ಲಿ ಸಂತಸಮಿತಿ
ಕರ್ನಾಟಕ ರಾಜ್ಯಾಧ್ಯಕ್ಷ ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹಾಗೂ
ಸಮಿತಿ ಪದಾಧಿಕಾರಿಗಳಾದ ಮಂಗಳೂರು ಓಂಶ್ರೀ ಮಠದ ಮಾತಾಶ್ರೀ ಓಂಶ್ರೀ ಶಿವಧ್ಯಾನ ಮಹಿ ಸರಸ್ವತಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ರಾಜೇಶ್ ನಾಥ್ ಗುರೂಜಿ, ಜಯಪ್ರಕಾಶ್ ಗುರೂಜಿ, ಕೇರಳ ಘಟಕದ ಅಧ್ಯಕ್ಷ ಶ್ರೀಪ್ರಭಾಕರಾನಂದ ಸರಸ್ವತಿ, ಉಪಾಧ್ಯಕ್ಷ ಸ್ವಾಮಿ ಸಾಯಿ ಈಶ್ವರಾನಂದ, ಸ್ವಾಮಿ ಕೈಲಾಹಾನಂದ, ಸ್ವಾಮಿ ವಿಶ್ವಾನಂದ, ವಿಶ್ವಕರ್ಮ ಶಂಕರಾಚಾರ್ಯ ಪೀಠದ ದಂಡಿ ಸ್ವಾಮಿ ಸಾಧು ಕೃಷ್ಣಾನಂದ ಸರಸ್ವತಿ, ಚೆರುಕೋಡು ಆಂಜನೇಯಾಶ್ರಮದ ಸ್ವಾಮಿ ರಮಾನಂದನಾಥ್ ಚೈತನ್ಯ, ತಮಿಳುನಾಡು ಘಟಕದ ಸ್ವಾಮಿ ವಿಶ್ವಲಿಂಗ ತಂಬಿರಾನ್, ಶ್ರೀ ಯುಕ್ತೇಶ್ವರ ಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಮೊದಲಾದವರು ಪಾಲ್ಗೊಂಡರು.
ಎಡನೀರು ಶ್ರೀಗಳನ್ನು ದಾರಿ ತಡೆದು, ವಾಹನ ಆಕ್ರಮಿಸಿದ ಘಟನೆ ಸಣ್ಣ ನಿರ್ಲಕ್ಷಿತ ವಿಚಾರವಲ್ಲ. ಈ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸದೇ ಆರೋಪಿಗಳನ್ನು ಬಂಧಿಸಿ ಬೆಳಕಿಗೆ ತಾರದೇ ಇರುವುದರಲ್ಲಿ ಸಂತ ಸಮಾಜಕ್ಕೆ ಆಕ್ಷೇಪ ಮತ್ತು ಆತಂಕವಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸ್ವಾಮೀಜಿ ವಾಹನ ಆಕ್ರಮಿಸಿದ ಆರೋಪಿಯನ್ನು ಬಂಧಿಸದೇ, ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸದೇ ಇರುವುದನ್ನು ಸಂತರ ಸಮಿತಿಯೇ ಪ್ರಶ್ನಿಸಿ, ಸ್ವಾಮೀಜಿಯವರ ತಂಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರಿತ್ತದ್ದು ಕಾಸರಗೋಡಲ್ಲಿ ಇದೇ ಮೊದಲು.