- ಎಡನೀರು ಮಠದ ಸ್ವಾಮೀಜಿ ಶ್ರೀಸಚ್ಛಿದಾನಂದ ಭಾರತೀ ಶ್ರೀಪಾದರ ಕಾರನ್ನು ತಡೆದು ಆಕ್ರಮಿಸಿ, ಸಂಚಾರ ಸ್ವಾತಂತ್ರ್ಯಕ್ಕೆ ಅಡ್ಡಿಯೊಡ್ಡಿದ ಅಪರಾಧಿಗಳನ್ನು ಈ ವರೆಗೂ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳದ ಆಡಳಿತ ವ್ಯವಸ್ಥೆ ನಾಡಿಗೆ ಶೋಭೆಯಲ್ಲ ಎಂದು ಅಖಿಲ ಭಾರತೀಯ ಸಂತ ಸಮಿತಿ ಆತಂಕ ಪ್ರಕಟಿಸಿದೆ. ಸಂತಸಮಿತಿಯ ನೇತೃತ್ವದಲ್ಲಿ ಪ್ರಮುಖ ಸ್ವಾಮೀಜಿಗಳವರು ನ.25ರಂದು ಎಡನೀರು ಮಠಕ್ಕೆ ಭೇಟಿ ಇತ್ತು, ಎಡನೀರು ಶ್ರೀಗಳ ಜತೆ ಮಾತುಕತೆ ನಡೆಸಿ ಘಟನೆಯ ಹಿನ್ನೆಲೆಯಲ್ಲಿ ಖಂಡನಾ ಸಭೆ ನಡೆಸಿದರು.
ಶ್ರೀಮದೆಡನೀರು ಮಠದ ಶ್ರೀಗಳ ವಾಹನ ಆಕ್ರಮಿಸಿದ ಪ್ರಕರಣವನ್ನು ಲಘುವಾಗಿಸದೇ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಸಮಾಜದ ಮುಂದಿಡಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಒತ್ತಾಯಿಸಿದೆ. ಶ್ರೀಗಳವರ ವಾಹನ, ಸಂಚಾರಕ್ಕೆ ಸಂರಕ್ಷಣೆ ಒದಗಿಸಬೇಕು ಮತ್ತು ಸನ್ಯಾಸತ್ವ ಹಾಗೂ ಪೀಠಾಧೀಶರಿಗೆ ಗೌರವ ನೀಡಬೇಕೆಂದು ಸಂತರು ಒಕ್ಕೊರಳಿನಿಂದ ಆಗ್ರಹಿಸಿದರು. ಯಾವುದೇ ಸರಕಾರಗಳಿರಲಿ ನಾಡಿನ ಸನ್ಯಾಸಿಗಳೆಲ್ಲರಿಗೆ ಸಂರಕ್ಷಣೆ ಸಹಿತ ಸಂಚಾರಕ್ಕೆ ರಕ್ಷಣೆ ನೀಡಬೇಕು. ಪ್ರಸ್ತುತ ಎಡನೀರು ಶ್ರೀಗಳ ವಾಹನದ ಮೇಲೆ ಆಕ್ರಮಣ ನಡೆದು ಇಷ್ಟು ದಿನಗಳಾದರೂ ಆರೋಪಿಯನ್ನು ಬಂಧಿಸದಿರುವುದು ಆತಂಕ ಮತ್ತು ಶಂಕೆಗೆ ಕಾರಣವಾಗುತ್ತಿದೆ ಎಂದು ಸಂತ ಸಮಿತಿ ಪದಾಧಿಕಾರಿಗಳಾದ ಪ್ರಮುಖ ಯತಿಗಳು ಹೇಳಿದರು.
ಎಡನೀರು ಮಠದಲ್ಲಿ ನ 25ರಂದು ಬೆಳಿಗ್ಗೆ ಸಭೆ ಸೇರಿದ ಅಖಿಲ ಭಾರತೀಯ ಸಂತಸಮಿತಿಯ ಖಂಡನಾ ಸಭೆಯಲ್ಲಿ ಸಮಿತಿಯ ಕರ್ನಾಟಕ ರಾಜ್ಯಾಧ್ಯಕ್ಷ ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು.
ಸಮಿತಿ ಪದಾಧಿಕಾರಿಗಳಾದ ಮಂಗಳೂರು ಓಂಶ್ರೀ ಮಠದ ಮಾತಾಶ್ರೀ ಓಂಶ್ರೀ ಶಿವಧ್ಯಾನ ಮಹಿ ಸರಸ್ವತಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ರಾಜೇಶ್ ನಾಥ್ ಗುರೂಜಿ, ಜಯಪ್ರಕಾಶ್ ಗುರೂಜಿ, ಕೇರಳ ಘಟಕದ ಅಧ್ಯಕ್ಷ ಶ್ರೀಪ್ರಭಾಕರಾನಂದ ಸರಸ್ವತಿ, ಉಪಾಧ್ಯಕ್ಷ ಸ್ವಾಮಿ ಸಾಯಿ ಈಶ್ವರಾನಂದ, ಸ್ವಾಮಿ ಕೈಲಾಹಾನಂದ, ಸ್ವಾಮಿ ವಿಶ್ವಾನಂದ, ವಿಶ್ವಕರ್ಮ ಶಂಕರಾಚಾರ್ಯ ಪೀಠದ ದಂಡಿ ಸ್ವಾಮಿ ಸಾಧು ಕೃಷ್ಣಾನಂದ ಸರಸ್ವತಿ, ಚೆರುಕೋಡು ಆಂಜನೇಯಾಶ್ರಮದ ಸ್ವಾಮಿ ರಮಾನಂದನಾಥ್ ಚೈತನ್ಯ, ತಮಿಳುನಾಡು ಘಟಕದ ಸ್ವಾಮಿ ವಿಶ್ವಲಿಂಗ ತಂಬಿರಾನ್, ಶ್ರೀ ಯುಕ್ತೇಶ್ವರ ಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡರು.