ಕಣಿಪುರ ಸುದ್ದಿಜಾಲ(ನ.20)
ಕಾಸರಗೋಡು ಜಿಲ್ಲೆಯಲ್ಲಿ ಪದೇ,ಪದೇ ವಂದೇಭಾರತ್ ರೈಲಿಗೆ ಕಲ್ಲೆಸೆಯುವುದು ಮತ್ತು ರೈಲ್ವೇ ಹಳಿಗೆ ಕಗ್ಗಲ್ಲಿರಿ ರೈಲು ಅನಾಹುತ ನಡೆಸುವ ಯತ್ನ ನಡೆಯುತ್ತಿದೆಯಾದರೂ “ಇದು ಕೆಲ ಹುಡುಗರ ಮೋಜಿನ ಕೆಲಸ” ಎಂದು ಲಘುವಾಗಿ ಹೇಳುತ್ತಾರೆ ಪ್ರತ್ಯೇಕ ತನಿಖಾದಳ…!
ಹದಿಹರೆಯದ ವಯಸ್ಸಿನ ಕೌತುಕದಿಂದ ಮೋಜಿಗಾಗಿ ಈ ಕೃತ್ಯ ಎಸಗಿರುವುದೆಂದು ಮಂಗಳವಾರ ಮುಂಜಾವ ಕಾಸರಗೋಡು ರೈಲ್ವೇ ಪೋಲೀಸರು ವಶಕ್ಕೆ ಪಡೆದು ಬಂಧಿಸಿದ ಆರೋಪಿ ಸಹಿತ ಅಪ್ರಾಪ್ತ ಬಾಲಕ ಹೇಳಿಕೆ ಇತ್ತಿರುವುದಾಗಿ ಪೋಲೀಸರು ಹೇಳಿದ್ದಾರೆ.
ಬಂಧಿತ ಆರೋಪಿ ಅಖಿಲ್ ರಾಜ್ ಮ್ಯಾಥ್ಯೂ
ಮಂಗಳವಾರ ಮುಂಜಾವ ಕೊಚ್ಚುವೇಳಿ ಎಕ್ಸ್ಪ್ರೆಸ್ ರೈಲು ಹಾದು ಹೋಗುವ ಸಂದರ್ಭ ಹಳಿಗೆ ಕಗ್ಗಲ್ಲು ಇರಿಸಲಾಗಿತ್ತು. ಲೋಕೋ ಪೈಲೆಟ್ ನೀಡಿದ ಮಾಹಿತಿಯಂತೆ ರೈಲ್ವೇ ಪೋಲೀಸರು ಪಟ್ಟಣಂತಿಟ್ಟ ಮೂಲದ ಅಖಿಲ್ ಜೋಸ್ ಮ್ಯಾಥ್ಯೂ (22)ಎಂಬಾತನನ್ನು ಕಳನಾಡು ರೈಲು ನಿಲ್ದಾಣದಿಂದ ಮಧ್ಯರಾತ್ರಿ ಬಂಧಿಸಿದ್ದರು. ಈತ ಗೆಳೆಯನ ಜತೆ ಕಾಸರಗೋಡು ಬಂದು ತಂಗಿರುವುದಾಗಿಯೂ, ಬೆಂಗಳೂರಿಗೆ ಹೊರಟಿರುವುದಾಗಿಯೂ ಈ ಮಧ್ಯೆ ಮೋಜಿಗಾಗಿ ಕಲ್ಲಿರಿಸಿ ನೋಡಿದ್ದಾಗಿಯೂ ಮಾಡಿರುವನೆಂದು ಪೋಲೀಸರು ಹೇಳುತ್ತಾರೆ.
ಇದೇ ಸಂದರ್ಭ ನ.4ರಂದು ಕಾಞಂಗಾಡು ಸಮೀಪದ ಪೂಚಕ್ಕಾಡ್ ನಲ್ಲಿ ವಂದೇಭಾರತ್ ರೈಲಿಗೆ ಕಲ್ಲೆಸೆದು ಗಾಜು ಪುಡಿಗೈದ ಪ್ರಕರಣದಲ್ಲಿ 17ರ ಹರೆಯದ ಅಪ್ರಾಪ್ತನನ್ನು ಬಂಧಿಸಿ ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಲಾಗಿದೆ. ಈತ ಈ ಮೊದಲೊಮ್ಮೆ ವಂದೇಭಾರತ್ ಗೆ ಕಲ್ಲೆಸೆದಿದ್ದನಂತೆ. ಆದರೆ ಅಂದು ರೈಲಿಗೆ ತಾಗಿರಲಿಲ್ಲ.ಹಾಗಾಗಿ ಪೂಚಕ್ಕಾಡಿನಲ್ಲಿ ಮತ್ತೊಮ್ಮೆ ಎಸೆದನಂತೆ.ಇದು ಮೋಜಿಗಾಗಿ, ಕೌತುಕದಿಂದ ನಡೆಸಿದ ಕೃತ್ಯ ಎಂದು ಆರೋಪಿಗಳು ಹೇಳುತ್ತಾರೆಂದು ಪೋಲೀಸರು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆ.
ರೈಲ್ವೇ ಪೋಲೀಸ್ ಮತ್ತು ಆರ್.ಪಿ.ಎಫ್ ಸಂಯುಕ್ತವಾಗಿ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಅವರು ನೀಡುತ್ತಿರುವ ಹೇಳಿಕೆಗಳೇ ಬಾಲಿಶವಾಗಿದೆ.
ಕಳೆದ ಒಂದು ವರ್ಷದಲ್ಲಿ ವಂದೇ ಭಾರತ್ ರೈಲಿಗೆ ಅನೇಕ ಬಾರಿ ಕಲ್ಲೆಸೆತವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಅಲ್ಲಲ್ಲಿ ಹಳಿಗೆ ಕಲ್ಲಿರಿಸುವ ಕೃತ್ಯಗಳೂ ಕಂಡುಬಂದಿದೆ. ಇದು ಅನಾಹುತ ನಡೆಸುವ ಮೊದಲಿನ ಟ್ರಯಲ್ ಪ್ರಯತ್ನಗಳಲ್ಲ ಎಂದು ನಂಬುವುದು ಹೇಗೆ?ರೈಲಿಗೆ ಕಲ್ಲೆಸೆಯುವುದು, ಮಧ್ಯರಾತ್ರಿ ರೈಲುಹಳಿಗೆ ಕಲ್ಲಿರಿಸುವುದು ಲಘುವಾಗಿ ಪರಿಗಣಿಸುವ ಮೋಜಿನ ವಿಚಾರವೇ..?
ಇಂಥ ನಿರ್ಲಕ್ಷ್ಯಕ್ಕೆ ಅಥವಾ ಇಂಥ ಬಾಲಿಶ ಹೇಳಿಕೆಗಳನ್ನು ನಂಬಿದರೆ ನಾಳೆ ಮಹಾದುರಂತಗಳೇನಾದರೂ ಘಟಿಸಿದ ಬಳಿಕ ಪಶ್ಚತಪಿಸಿ ಫಲವುಂಟೇ?
ರೈಲುಗಳನ್ನು ಕೇಂದ್ರೀಕರಿಸಿ ನಡೆಯುವ ದುಷ್ಕೃತ್ಯಗಳ ವಿರುದ್ಧ ಕೇಂದ್ರ ರೈಲ್ವೇ ಖಾತೆಯೇ ಗಮನಿಸಿ ನಾಗರಿಕರ ಪ್ರಯಾಣಕ್ಕೆ ಸುರಕ್ಷೆಯೊದಗಿಸಬೇಕಾಗಿದೆ.