ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ರನ್ನು ದೀರ್ಘ 29ವರ್ಷದ ದಾಂಪತ್ಯದ ಬಳಿಕ ಪತ್ನಿ ಸೈರಾಬಾನು ತೊರೆದಿದ್ದಾರೆ. ನಮ್ಮಿಬ್ಬರ ದಾಂಪತ್ಯಕ್ಕೆ ವಿಚ್ಛೇದನ ನೀಡುತ್ತಿರುವುದಾಗಿ ಸೈರಾಬಾನು ಪರ ವಕೀಲೆ ವಂದನಾ ಷಾ ಹೇಳಿಕೆ ಪ್ರಕಟಿಸಿದ್ದಾರೆ.
1995ರಲ್ಲಿ ಇವರ ವಿವಾಹ ನಡೆದಿತ್ತು. ಇವರಿಗೆ ಖದೀಜಾ, ರಹೀಮಾ, ಅವಾನ್ ಎಂಬ ಮೂವರು ಮಕ್ಕಳಿದ್ದಾರೆ. ಈ ಪೈಕಿ ಖದೀಜಾಳ ವಿವಾಹ ನಡೆದಿದೆ. ನಮ್ಮಿಬ್ಬರ ನಡುವೆ ಆಳವಾದ ಪ್ರೀತಿ ಇದೆ. ಆದರೆ ಒತ್ತಡದ ಕಠಿಣ ಪರಿಸ್ಥಿತಿ ಇದೆ. ನಮ್ಮ ನಡುವಣ ಅಂತರ ಈ ಕಾರಣದಿಂದ ಉಂಟಾಗಿದೆ. ಅದು ಸರಿಪಡಿಸಲಾಗದ್ದು ಎಂದು ಸೈರಾ ಬಾನು ಪರ ವಕೀಲರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಸಂಗೀತ ನಿರ್ದೇಶಕರಾಗಿದ್ದ ಆರ್.ಕೆ.ಶೇಖರ್ -ಕರೀಮಾ ಬಾನು(ಕಸ್ತೂರಿ) ದಂಪತಿಯ ನಾಲ್ವರು ಮಕ್ಕಳಲ್ಲಿ ಏಕೈಕ ಪುತ್ರನಾಗಿದ್ದ ದಿಲೀಪ್ ಕುಮಾರ್ ಯಾನೆ ಅಲ್ಲಾರಖಾ ರಹ್ಮಾನ್ 9ನೇ ವಯಸ್ಸಲ್ಲಿ ತಂದೆಯನ್ನು ಕಳೆದುಕೊಂಡು ಅಮ್ಮನ ಆಸರೆಯಲ್ಲಿ ಬೆಳೆದು 29ರ ಹರೆಯದಲ್ಲಿ ಅಮ್ಮನ ಆಯ್ಕೆಯಂತೆ ಸೈರಾಬಾನುವನ್ನು ವರಿಸಿದ್ದರು. ಇವರ ದಾಂಪತ್ಯದ ಬಿಕ್ಕಟ್ಟು ತಮ್ಮ ಖಾಸಗಿ ಜೀವನದ್ದು ಎಂದು ಸೈರಾ ಬಾನು ಹೇಳಿದ್ದಾರೆಂದು ವರದಿಗಳಿವೆ.