ನಾಗನಕಟ್ಟೆಗೆ ಕೈ ಮುಗಿದು ಬರುತ್ತೇನೆಂದು ರಿಕ್ಷಾ ಇಳಿದು ಹೋದ ನಿವೃತ್ತ ಬೇಂಕ್ ನೌಕರನ ಮೃತದೇಹ ಕರೆಯಲ್ಲಿ ಪತ್ತೆಯಾಗಿದೆ.
ಮಾನ್ಯ ಸಮೀಪದ ಕೊಲ್ಲಂಗಾನ ಬಾರಿಕ್ಕಾಡು ನಿವಾಸಿ, ನಿವೃತ್ತ ಎಸ್.ಬಿ.ಐ ಬೇಂಕ್ ನೌಕರ ರಾಮಚಂದ್ರ ನಾಯ್ಕ ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಬೆಳಿಗ್ಗೆ ಮನೆಯಿಂದ ಕೊಲ್ಲಂಗಾನಕ್ಕೆಂದು ರಿಕ್ಷಾದಲ್ಲಿ ಹೊರಟಿದ್ದರು. ಪ್ರಯಾಣಮಧ್ಯೆ ಕೊಲ್ಲಂಗಾನ ಸಮೀಪ ಪಾಂಡವರಕೆರೆ ಬಳಿಯ ನಾಗನಕಟ್ಟೆಗೆ ಕೈ ಮುಗಿದು ಬರುವುದಾಗಿ ತಿಳಿಸಿ, ರಿಕ್ಷಾ ನಿಲ್ಲಿಸಿ ಇಳಿದು ಹೋದವರು ಎಷ್ಟೇ ಹೊತ್ತಾದರೂ ಮರಳಿ ಬಾರದೇ ಇರುವುದನ್ನು ಗಮನಿಸಿ ರಿಕ್ಷಾ ಚಾಲಕ ಹುಡುಕಿ ನಡೆದಾಗ ಕೆರೆ ದಂಡೆಯಲ್ಲಿ ಅವರು ತೊಟ್ಟಿದ್ದ ಉಡುಪು, ವಾಚು,ಮೊಬೈಲ್ ಫೋನು ಪತ್ತೆಯಾಯಿತು.
ಕೂಡಲೇ ಪೋಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ತಿಳಿಸಿದಾಗ ಕಾಸರಗೋಡಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬಂದಿಗಳು ಕೆರೆಯಿಂದ ಮೃತದೇಹ ಮೇಲೆತ್ತಿದರು. ಬದಿಯಡ್ಕ ಪೋಲೀಸರು ಅಸಹಜ ಮರಣವೆಂದು ಮೊಕದ್ದಮೆ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.ಮೃತರು ಪತ್ನಿ ಸರೋಜಿನಿ, ಮಕ್ಕಳಾದ ದಿವ್ಯ, ಪೂರ್ಣಿಮ, ಚೈತ್ರ ಹಾಗೂ ಬಂಧುಬಳಗವನ್ನಗಲಿದ್ದಾರೆ.