ರೈಲು ಹಳಿಗೆ ಕಗ್ಗಲ್ಲಿರಿಸಿ ರೈಲು ಅನಾಹುತ ಸೃಷ್ಠಿಸುವ ವಿಫಲಯತ್ನವೊಂದು ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಓರ್ವ ಅಪ್ರಾಪ್ತನ ಸಹಿತ ಇಬ್ಬರು ರೈಲ್ವೇ ಪೋಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.
ಕಾಸರಗೋಡಿನ ಕೀಯೂರು -ಕಳನಾಡು ಭಾಗದಲ್ಲಿ ಇಂದು ಮುಂಜಾವ 1.20ರ ಬಳಿಕ ಈ ಘಟನೆ ನಡೆದಿದೆ. ಅಮೃತಸರ-ಕೊಚ್ಚುವೇಳಿ ರೈಲು ಸಾಗುವ ಸಂದರ್ಭ ಗಮನಿಸಿ ರೈಲು ಹಳಿಗೆ ಕಗ್ಗಲ್ಲಿರಿಸಿ ಅನಾಹುತ ಸೃಷ್ಟಿಸಲು ಪ್ರಯತ್ನ ನಡೆಸಲಾಗಿತ್ತು. ಇದು ತಕ್ಷಣವೇ ಲೋಕೋಪೈಲೆಟ್ ಗಮನಕ್ಕೆ ಬಂದಿದ್ದು, ಕೂಡಲೇ ರೈಲ್ವೇ ಪೋಲೀಸರಿಗೆ ಮಾಹಿತಿ ನೀಡಿದರು. ಬಳಿಕ ಕಲ್ಲು ಎತ್ತಿ ಹಳಿ ಸುಗಮಗೊಳಿಸುವುದರ ಜತೆಯಲ್ಲೇ ಪೋಲೀಸರು ಪರಿಸರವಿಡೀ ಕಾರ್ಯಾಚರಿಸಿದಾಗ ಇಬ್ಬರು ಬಲೆಗೆ ಬಿದ್ದಿದ್ದಾರೆ. ಈ ಪೈಕಿ ಓರ್ವ ಅಪ್ರಾಪ್ತನಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ವಿಚಾರಣೆಯ ಬಳಿಕ ನೀಡುವುದಾಗಿ ಪೋಲೀಸ್ ಮೂಲ ತಿಳಿಸಿದೆ.
ಮಂಗಳೂರು-ಕಣ್ಣೂರು ನಡುವೆ ರೈಲು ಹಳಿಗೆ ಕಲ್ಲಿರಿಸುವುದು, ವಂದೇ ಭಾರತ್ ರೈಲಿಗೆ ಕಲ್ಲೆಸೆಯುವುದೇ ಮೊದಲಾದ ಪ್ರಕರಣಗಳು ಪದೇ, ಪದೇ ನಡೆಯುತಿದ್ದು, ಈ ಕುರಿತು ಗಂಭೀರ ತನಿಖೆ ನಡೆಯಬೇಕಿದೆ. ಅಪ್ರಾಪ್ತರನ್ನು ಬಳಸಿ ಈ ಕೃತ್ಯ ನಡೆಸುವುದಾರು? ಉದ್ದೇಶ ಏನೆಂಬುದನ್ನು ಕೂಡಾ ಬಯಲು ಮಾಡಬೇಕಾಗಿದೆ.