ಕನಕದಾಸರ ರಚನೆಗಳೆಂದರೆ ಕೇವಲ ಗೀತಸಾಹಿತ್ಯವಲ್ಲ, ಅದು ಭಗವದ್ವಚನ : ಪಲಿಮಾರು ಶ್ರೀ

ಮಂಗಳೂರಿನ ಕದ್ರಿ ಮಂಜುಶ್ರೀಯಲ್ಲಿ ಕಲ್ಕೂರ ಪ್ರತಿಷ್ಠಾನದ ಕನಕಪ್ರಶಸ್ತಿ ಮುಡಿದ ರಾಮಕೃಷ್ಣ ಕಾಟುಕುಕ್ಕೆ

by Narayan Chambaltimar

ಗಡಿನಾಡಿನ ಕೇರಳ-ಕರ್ನಾಟಕದ ಗಡಿಯಲ್ಲಿ ದಾಸಸಾಹಿತ್ಯದ ಭಜನೆಗಳನ್ನು ಮೆರೆಸಿ, ಮಾತೆಯರನ್ನು ಭಜನಾ ಸಂಕೀರ್ತನೆಯಲ್ಲಿ ಪೋಣಿಸಿ ಸಮಾಜಕಟ್ಟಿದ ರಾಮಕೃಷ್ಣ ಕಾಟುಕುಕ್ಕೆಯವರು ಕನಕದಾಸರು ಸಹಿತ ದಾಸ ಪರಂಪರೆಯ ಭಜನಾಸಾಹಿತ್ಯವನ್ನು ಮನೆ,ಮನಕೆ ಮುಟ್ಟಿಸಿ, ಸಂತರ ಸಂಕೀರ್ತನೆಯನ್ನು ಬದುಕಿಸಿದ್ದಾರೆ. ಇಂಥವರಿಗೆ ಕನಕ ಪ್ರಶಸ್ತಿ ಇತ್ತು ಮಾನಿಸುವುದರಲ್ಲಿ ಪಾಲ್ಗೊಳ್ಳುವಾಗ ನಮಗೂ ಸಂಭ್ರಮ ಎನಿಸುತ್ತದೆ ಎಂದು ಉಡುಪಿ ಪಲಿಮಾರು ಮಠದ ಶ್ರೀಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ನುಡಿದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕದ್ರಿಕಂಬಳ ರಸ್ತೆಯಲ್ಲಿರುವ “ಮಂಜುಶ್ರೀ”ಯಲ್ಲಿ ನಡೆದ ಗೋಪೂಜೆ ಮತ್ತು ಕನಕ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು, ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು

ಕನಕದಾಸರ ರಚನೆಗಳೆಂದರೆ ಅದು ಕೇವಲ ಪದ್ಯ ಗಾಯನದ ಗೀತೆಗಳಲ್ಲ, ಅದು ವೇದ,ವೇದಾಂತಗಳ ಸಾರಸಾಹಿತ್ಯೋತ್ಕರ್ಷದ ಭಗವಂತನ ಗೀತೆ. ಅವರೊಳಗೆ ಭಗವಂತನ ವಿಭೂತಿ ರೂಪ ಮೈದಾಳಿರುವುದರಿಂದಲೇ ಇದೆಲ್ಲ ಸಾಧ್ಯವಾಯಿತು. ಇಷ್ಟಕ್ಕೂ ಕನಕದಾಸರು ಜಾತಿಗೆ ಸೀಮಿತರಲ್ಲ, ಅವರು ಮಾನವತೆಯ ದಾರ್ಶನಿಕರು ಎಂದು ಶ್ರೀಗಳು ನುಡಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

 

ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ದೀಪಪ್ರಜ್ವಲನೆಗೈದರು. ಬಳಿಕ 2024ನೇ ಸಾಲಿನ ಕನಕದಾಸ ಪ್ರಶಸ್ತಿ ಸ್ವೀಕರಿಸಿದರು.
ಭಜನೆ ನನ್ನ ಪಾಲಿಗೆ ಅಮ್ಮನ ಕೊಡುಗೆ. 80ರ ಹರೆಯದ ನನ್ನಮ್ಮ ಇಂದಿಗೂ ಮನೆಯಲ್ಲಿ ಭಜನೆ ಹಾಡುತ್ತಾಳೆ. ಎಳವೆಯಲ್ಲೇ ಆಕೆಯಿಂದ ಪ್ರಚೋದಿತನಾದ ನಾನು ಕಾಟುಕುಕ್ಕೆ ದೇವಳದಲ್ಲಿ ಹಾಡುತ್ತಾ ಬೆಳೆದೆ. ನಾನೇನು ಕಲಿತೆನೋ ಅದನ್ನೇ ಸಮಾಜಕ್ಕೆ ಜಾತಿ ನೋಡದೇ ಎಲ್ಲರಿಗೂ ಕಲಿಸುತ್ತಾ, ದಾಸ ಸಾಹಿತ್ಯದ ಪ್ರಚಾರ,ಪ್ರಸಾರಕ್ಕೆ ನನ್ನನ್ನೇ ಸಮರ್ಪಿಸಿದೆ. ಈಗ ಒಲಿದು ಬಂದ ಪ್ರಶಸ್ತಿ ಗೌರವ ನನಗಲ್ಲ, ಇದು ಭಜನಾರ್ಥಿಗಳಿಗೆ ಸಿಕ್ಕ ಗೌರವ ಎಂದು ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಕಾಟುಕುಕ್ಕೆ ನುಡಿದರು.

ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಕನಕದಾಸ ಸಾಹಿತ್ಯ ಮೌಲ್ಯದ ಉಪನ್ಯಾಸ ಇತ್ತರು. ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಸದಸ್ಯರಾದ ಮನೋಜ್ ಕುಮಾರ್, ಮನೋಹರ್, ರಾಮಚಂದ್ರ ಎಲ್ಲೂರು, ಜನಾರ್ಧನ ಹಂದೆ, ಪತ್ರಕರ್ತ,ಲೇಖಕ ಎಂ.ನಾ. ಚಂಬಲ್ತಿಮಾರ್, ಪೂರ್ಣಿಮ ಪೇಜಾವರ, ಸುಧಾಕರ ರಾವ್ ಸಹಿತ ಪ್ರಮುಖರು ಉಪಸ್ಥಿತರಿದ್ದರು. ದಯಾನಂದ ಕಟೀಲು, ಪೂರ್ಣಿಮ ರಾವ್ ಪೇಜಾವರ ನಿರೂಪಿಸಿದರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00