ಕೇರಳ ಎಂದರೆ ಶಂಕರಾಚಾರ್ಯ ಭೂಮಿ. ಇಲ್ಲಿಯ ಮೂಲಕ ಹಿಂದೂ ಸನಾತನಿಗಳಲ್ಲಿ ಆಚಾರ, ವಿಚಾರ,ಪ್ರಚಾರ,ಅನುಷ್ಠಾನಕ್ಕೆ ಪ್ರಾಧಾನ್ಯತೆ ಇರಬೇಕು. ಆಧುನಿಕ ಶಿಕ್ಷಣದ ಮೂಲಕ ನಾವು ಯಾವುದೇ ಹುದ್ದೆ, ಉದ್ಯೋಗಗಳಲ್ಲಿದ್ದರೂ ನಮ್ಮ ಮೂಲ ಆಚಾರ, ಅನುಷ್ಠಾನ ತೊರೆಯಬಾರದು. ಈ ಮೂಲಕ ಧರ್ಮ ಸಂರಕ್ಷಣೆಯಾಗಬೇಕು ಎಂದು ಕಾಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕಲ ವೀಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಕಾಸರಗೋಡಿನ ಶ್ರೀಮದೆಡನೀರು ಮಠಕ್ಕೆ ಚಿತ್ತೈಸಿ ಮೊಕ್ಕಾಂ ಹೂಡಿ ಶ್ರೀಮಠದ ಗೌರವಾಭಿನಂಧನೆ ಸ್ವೀಕರಿಸಿದ ಸಭೆಯಲ್ಲವರು ಆಶೀರ್ವಚನ ನೀಡುತ್ತಾ ಮಾತನಾಡಿದರು.
ಸನಾತನ ಧರ್ಮ ಎಲ್ಲರಿಗೂ, ಎಲ್ಲದಕ್ಕೂ ಅವಕಾಶ ಇತ್ತಿದೆ. ಅದಕ್ಕೆ ಹಾನಿಯಾಗದಂತೆ ಗೌರವದಿಂದ ಅನುಸರಿಸಬೇಕು. ಇದರಂತೆ ಸಂಸ್ಕೃತ, ಜ್ಯೋತಿರ್ವಿಜ್ಞಾನ, ವೇದ, ಮಂತ್ರ ಪ್ರಚಾರ ಆಗಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ಪರಿಪೂರ್ಣವಾದ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಅದು ಬಾಕಿ ಇದೆ. ಅದಕ್ಕಾಗಿ ಧರ್ಮ ಪರಿಪಾಲನೆಯ ಜಾಗೃತಿ ಆಗಬೇಕಾಗಿದೆ ಎಂದವರು ನುಡಿದರು.
ಕಾಂಚಿ ಪೀಠದಿಂದಾಗಮಿಸಿದ ವೇದವಿದ್ವಾಂಸರುಗಳಿಂದ ಹರಿಹರಾದೈತ ಸಾರುವ ಮಂತ್ರ ಮತ್ತು ಅಕ್ಷರ ಮಹತ್ವದ ಪ್ರಾರ್ಥನಾ ಶ್ಲೋಕ ಪ್ರವಾಚನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಮಠದ ಪ್ರತಿನಿಧಿ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಕಾಂಚಿ ಶ್ರೀಗಳಿಂದ ಸನ್ಯಾಸದೀಕ್ಷೆ ಪಡೆದ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳು ಆಶೀರ್ವಚನ ನೀಡಿ ಕಾಂಚಿ ಪೀಠದ ಮಾರ್ಗದರ್ಶನ ಮತ್ತು ಸಹಾಯದಿಂದ ಎಡನೀರಿನಲ್ಲಿ ವೇದ ಶಿಕ್ಷಣ ಪಾಠಶಾಲೆ ನಡೆಯುತ್ತಿದೆ. ವೇದ ಕಲಿಯಲು ಜನರಿಲ್ಲದೇ ಹೋದರೆ ಸನಾತನ ಭಾರತೀಯ ಹಿಂದುತ್ವಕ್ಕೆ ಅಪಾಯವಿದೆ. ಆದ್ದರಿಂದ ವೇದ ಕಲಿಯುವವರಷ್ಟೇ ಅವರನ್ನು ವೇದಾಧ್ಯಯನಕ್ಕೆ ಕಳುಹಿಸಿದ ಹೆತ್ತವರೂ ಅಭಿನಂದನೀಯರು. ದೇಶದಲ್ಲಿ ವೇದದ ಪುನರುತ್ಥಾನಕ್ಕೆ ಕಾಂಚಿಪೀಠಧ ಕೊಡುಗೆ ಅದ್ವಿತೀಯ ಎಂದು ನುಡಿದರು.
ಡಾ.ಟಿ.ಶ್ಯಾಂಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜೇಂದ್ರ ಕಲ್ಲೂರಾಯ ವಂದಿಸಿದರು. ನಿನ್ನೆ ಬೆಳಿಗ್ಗೆ ಎಡನೀರು ಮಠಕ್ಕೆ ಆಗಮಿಸಿದ ಕಾಂಚಿಶ್ರೀಗಳನ್ನು ತೆರೆದ ವಾಹನದಲ್ಲಿ ರಾಜೋಚಿತ ಗೌರವಗಳಿಂದ ಪೂರ್ಣಕುಂಭ ಸ್ವಾಗತದಲ್ಲೌ ಮಠಕ್ಕೆ ಸ್ವಾಗತಿಸಲಾಯಿತು. ಬಳಿಕ ವೈದಿಕ ಪೂಜಾನುಷ್ಠಾನದಲ್ಲಿ ನಿರತರಾದ ಅವರನ್ನು ಸಂಜೆಯ ಸಮಾರಂಭದಲ್ಲಿ ಗೌರವಾದರಣೆಯಿಂದ ಅಭಿವಂದಿಸಲಾಯಿತು.
ಇಂದು ಸುಳ್ಯಕ್ಕೆ..
ಎಡನೀರು ಮೊಕ್ಕಾಂನಿಂದ ಇಂದು ಬೆಳಿಗ್ಗೆ ಕಾಂಚಿ ಶ್ರೀಗಳು ಸುಳ್ಯದ ಭಾರಧ್ವಾಜ ಆಶ್ರಮಕ್ಕೆ ತೆರಳಿದರು. ಬೆಳಿಗ್ಗೆ 11ರಿಂದ ಸಂಜೆಯ ತನಕ ಕಾರ್ತಿಕ ಸೋಮವಾರದ ಪೂಜೆಯಲ್ಲಿ ನಿರತರಾಗುವ ಅವರು ಸಂಜೆ 7ಕ್ಕೆ ಚೆನ್ನಕೇಶವ ದೇವಾಲಯಕ್ಕೆ ಭೇಟಿ ನೀಡುವರು. ಇಂದು ರಾತ್ರಿ ಭಾರಧ್ವಾಜ ಆಶ್ರಮದಲ್ಲಿ ಮೊಕ್ಕಾಂ ಹೂಡಿ ನಾಳೆ ಕಟೀಲಿಗೆ ತೆರಳುವರು.