- ವಯನಾಡಿನ ಚೂರಲ್ಮಲ ಭೂಕುಸಿತದಲ್ಲಿ ನಾಶಗೊಂಡ ಶಿವಾಲಯವನ್ನು ಮೂರು ಕೋಟಿ ರೂ ವೆಚ್ಚದಲ್ಲಿ ಕಾಂಚೀಪೀಠದ ವತಿಯಿಂದ ಪುನರ್ನವೀಕರಿಸಿ ಸ್ಥಾಪಿಸಲಾಗುವುದೆಂದು ಕಾಂಚಿ ಪೀಠಾಧೀಶ ಜಗದ್ಗುರು
ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು. ಎಡನೀರು ಮಠಕ್ಕೆ ನಿನ್ನೆ ಆಗಮಿಸಿದ್ದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿಯಾದಾಗ ಈ ಮಾಹಿತಿ ಇತ್ತರು.
ಭೂಕುಸಿತದಲ್ಲಿ ಮೃತಪಟ್ಟ ದೇವಾಲಯದ ಅರ್ಚಕರ ಆಶ್ರಿತ ಕುಟುಂಬಕ್ಕೂ, ಸ್ಥಳೀಯ ಶಾಲಾ ಪುನರ್ನಿರ್ಮಾಣಕ್ಕೂ ಸಹಾಯ ನೀಡಲಾಗುವುದೆಂದು ಅವರು ಘೋಷಿಸಿದ್ದಾರೆ. ಶಿಕ್ಷಣ, ವೇದ ಪ್ರಸರಣ, ಸನಾತನ ಆಚಾರನುಷ್ಠಾನ ಭೂಯಿಷ್ಠ ಸಂಸ್ಕಾರ ಭೋಧನೆಗೆ ಕಾಂಚಿಪೀಠ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಆದಿಶಂಕರರ ನಾಡಿನಲ್ಲೊಂದು ಶಿವಾಲಯ ಮರುನಿರ್ಮಿಸುವುದು ಮಹತ್ವದ ವಿಚಾರ ಎಂದವರು ನುಡಿದರು.
ಗ್ರಾಮೀಣ ಪ್ರದೇಶದಲ್ಲಿ ದೇವಸ್ವಂ ಆಧೀನಕ್ಕೊಳಪಡದ 120 ದೇವಾಲಯಗಳ ಅರ್ಚಕರಿಗೆ ತಲಾ ಮಾಸಿಕ 3ಸಾವಿರ ರೂಗಳಂತೆ ದೇವಪೂಜಾ ಯೋಜನೆ ಮೂಲಕ ಕಾಂಚೀಪೀಠ ದಕ್ಷಿಣೆ ನೀಡುತ್ತಿದೆ.
ಇದೇ ಡಿ.27ರಂದು ಕೇರಳದ ಎರ್ನಾಕುಳಂನಲ್ಲಿರುವ ಸಮೂಹಮಠದಲ್ಲಿ ಸ್ತ್ರೀಶಾಕ್ತೀಕರಣಕ್ಕಾಗಿ ಸಹಸ್ರ ಸುಹಾಸಿನಿ ಪೂಜೆ ನಡೆಯಲಿದೆಯೆಂದೂ ಅವರು ತಿಳಿಸಿದರು.
ಸಮಾಜದಲ್ಲಿ ಭೌತಿಕ ಆಕರ್ಷಣೆಯ ಲೋಲುಪತೆಯಿಂದ ಸ್ವಧರ್ಮೀಯ ಆಚಾರ, ಅನುಷ್ಠಾನ ಪರಿಪಾಲನೆಗಳು ಕುಸಿಯುತ್ತಿವೆ. ಇದನ್ನು ಸರಿಮಾಡುವುದಕ್ಕಾಗಿ ಧರ್ಮದ ಪ್ರಚಾರ,ಪ್ರಸಾರ ಮಾಡುವುದು ತನ್ನ ಧ್ಯೇಯವಾಗಿದ್ದು,ಹಿಂದೂ ಸಮಾಜ ಸನಾತನ ಸಂಸ್ಕಾರ, ಆಚಾರ ಪರಿಪಾಲನೆಗಳತ್ತ ಗಮನಿಸಿ, ತೊಡಗಿಸಬೇಕು ಎಂದವರು ಆಹ್ವಾನ ಇತ್ತರು.
ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದಭಾರತೀ ಶ್ರೀಪಾದರನ್ನು ಸ್ಮರಿಸಿಕೊಂಡ ಅವರು ಭಾರತದ ಇತಿಹಾಸದಲ್ಲೇ ಅವರು ಧಾರ್ಮಿಕ ಜಾಗೃತಿ ಮೂಡಿಸಿ, ನ್ಯಾಯಾಂಗದ ಕಣ್ತೆರೆದ ಪುಣ್ಯ ಪುರುಷರು. ಅವರೊಂದಿಗೆ ಕಾಂಚೀ ಪೀಠಕ್ಕೆ ಆದರದ ಸಂಬಂಧಗಳಿವೆ ಎಂದು ಸ್ಮರಿಸಿಕೊಂಡರು. ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರ ನೇತೃತ್ವದಲ್ಲಿ ಕಾಂಚಿಶ್ರೀಗಳನ್ನು ಮಠಕ್ಕೆ ಬರಮಾಡಿಸಿ ಗೌರವಾಭಿನಂಧನೆ ನೀಡಲಾಯಿತು.