ಮಂಗಳೂರಿನ ಸೋಮೇಶ್ವರ ಬಳಿಯ ವಾಸ್ಕೋ ಬೀಚ್ ರೆಸಾರ್ಟಿನ ಈಜುಕೊಳದಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿನಿಯರು ಮೂಳುಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರೆಸಾರ್ಟ್ ಮಾಲಕನನ್ನು ಬಂಧಿಸಿ, ರೆಸಾರ್ಟಿನ ಲೈಸನ್ಸ್ ರದ್ದುಪಡಿಸಿ, ಸೀಲ್ಡೌನ್ ಮಾಡಲಾಗಿದೆ.
ರೆಸಾರ್ಟಿನ ಮಾಲಕ ಮನೋಹರ್ ಪುತ್ರನ್ ಎಂಬವರನ್ನು ಸೋಮೇಶ್ವರ ಪೋಲೀಸರು ಬಂಧಿಸಿದ್ದು, ಸಾಯಿರಾಮ್ ವಾಸ್ಕೋ ಬೀಚ್ ರೆಸಾರ್ಟಿನ ಟೂರಿಸಂ ಪರ್ಮಿಟ್ ಸಹಿತ ಲೈಸನ್ಸ್ ರದ್ದುಪಡಿಸಿ ಬೀಗಜಡಿದು, ಕೇಸು ದಾಖಲಿಸಲಾಯಿತು.
ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೃತಪಟ್ಟವರು ಮೈಸೂರಿನಿಂದ ಆಗಮಿಸಿದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.
ಮೈಸೂರು ಮೊಹಲ್ಲಾದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್(21), ಮೈಸೂರು ಕುರುಬರ ಹಳ್ಳಿ ನಿವಾಸಿ ಮಲ್ಲೇಶ್ ಎಂಬವರ ಪುತ್ರಿ ನಿಶಿತ ಎಂ.ಡಿ(21), ಮೈಸೂರು ಕೆ.ಆರ್ ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್(20) ಮೃತಪಟ್ಟವರೆಂದು ಗುರುತಿಸಲಾಗಿದೆ.
ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಪೆರಿಬೈಲ್ ಎಂಬಲ್ಲಿರುವ ವಾಸ್ಕೋ ಬೀಚ್ ರೆಸಾರ್ಟ್ಗೆ ಬಂದಿದ್ದ ಗೆಳತಿಯರು ಆದಿತ್ಯವಾರ ಬೆಳಿಗ್ಗೆ ಈಜುಕೊಳಕ್ಕೆ ನೀರಾಟವಾಡಲು ಇಳಿದಿದ್ದರು. ಈಜುಕೊಳದ ಸುತ್ತ ಮೊಬೈಲ್ ಫೋನಿನ ವೀಡಿಯೋ ಕೆಮರಾ ಆನ್ ಮಾಡಿಟ್ಟು ಸ್ನಾನ ಸಹಿತ ನೀರಾಟ ಆಡುತ್ತಿದ್ದಾಗ ಆಕಸ್ಮಿಕ ದುರಂತ ಸಂಭವಿಸಿದೆ.
ಈಜುಕೊಳ ದಲ್ಲಿ ಆಳ ಇರುವುದನ್ನರಿಯದೇ ನೀರಲ್ಲಿ ಮುಳುಗಿದಾಗ ಈಜು ಬಾರದೇ ದುರಂತ ಘಟಿಸಿದೆ.
ಯುವತಿಯರು ನೀರಲ್ಲಿ ಮುಳುಗಿ ಸಾವಪ್ಪುವ ದೃಶ್ಯ ರೆಸಾರ್ಟಿನ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈಜುಕೊಳಕ್ಕೆ ಸಿಬ್ಬಂದಿಯಾಗಲೀ, ನೀರಿನ ಆಳದ ಸೂಚನಾ ಫಲಕವಾಗಲಿ ಇರಲಿಲ್ಲ. ರೆಸಾರ್ಟು ಸರಕಾರಿ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದುದು ಬೆಳಕಿಗೆ ಬಂದಿದೆ.