ಮಂಗಳೂರು ಸಮೀಪದ ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ಒಂದರ ಈಜಿಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ನಡೆದಿದೆ.
ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೃತಪಟ್ಟವರು ಮೈಸೂರಿನಿಂದ ಆಗಮಿಸಿದ ಗೆಳತಿಯರೆಂದು ತಿಳಿದುಬಂದಿದೆ.
ಮೈಸೂರು ಮೊಹಲ್ಲಾದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್(21), ಮೈಸೂರು ಕುರುಬರ ಹಳ್ಳಿ ನಿವಾಸಿ ಮಲ್ಲೇಶ್ ಎಂಬವರ ಪುತ್ರಿ ನಿಶಿತ ಎಂ.ಡಿ(21), ಮೈಸೂರು ಕೆ.ಆರ್ ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್(20) ಮೃತಪಟ್ಟವರೆಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಪೆರಿಬೈಲ್ ಎಂಬಲ್ಲಿರುವ ಖಾಸಗಿ ರೆಸಾರ್ಟ್ಗೆ ಬಂದಿದ್ದ ಗೆಳತಿಯರು ಆದಿತ್ಯವಾರ ಬೆಳಿಗ್ಗೆ ಈಜುಕೊಳಕ್ಕೆ ನೀರಾಟವಾಡಲು ಇಳಿದಿದ್ದರು. ಈಜುಕೊಳದ ಸುತ್ತ ಮೊಬೈಲ್ ಫೋನಿನ ವೀಡಿಯೋ ಕೆಮರಾ ಆನ್ ಮಾಡಿಟ್ಟು ಸ್ನಾನ ಸಹಿತ ನೀರಾಟ ಆಡುತ್ತಿದ್ದಾಗ ಆಕಸ್ಮಿಕ ದುರಂತ ಸಂಭವಿಸಿದೆ.
ಈಜುಕೊಳ ದಲ್ಲಿ ಆಳ ಇರುವುದನ್ನರಿಯದೇ ನೀರಲ್ಲಿ ಮುಳುಗಿದಾಗ ಈಜು ಬಾರದೇ ದುರಂತ ಘಟಿಸಿರಬೇಕೆಂದು ಪೋಲೀಶರು ಶಂಕೆ ಪ್ರಕಟಿಸಿದ್ದಾರೆ.