ಕಣಿಪುರ ಸುದ್ದಿಜಾಲ,( ನ.17)
ನಮ್ಮ ರಕ್ತದಾನದಿಂದ ನಮಗರಿಯದೇ ಮತ್ತೊಬ್ಬರ ಜೀವ ಕಾಪಾಡಲ್ಪಡುತ್ತದೆ. ಆದ್ದರಿಂದ ರಕ್ತದಾನವೆಂದರೆ ಅದು ಜೀವದಾನ. ಆರೋಗ್ಯವಂತ ಜನರು ಮನಸ್ಸು ಮಾಡಿದರೆ ಅನೇಕರ ಜೀವ ಕಾಪಾಡುವ ಕೆಲಸ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಅತ್ಯಂತ ಅಗತ್ಯವಾದ ರಕ್ತದಾನ ಮಾಡಲು ಜನತೆ ಮುಂದಾಗಬೇಕು. ರಕ್ತದಾನ ಮಾಡಿದರೆ ಯಾರಿಗೂ, ಯಾವ ತೋಂದರೆಯೂ ಇಲ್ಲ ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ.ಶಾಂಭವಿ ಕಿಶೋರ್ ಕುಂಬಳೆ ಹೇಳಿದರು.
ಕುಂಬ್ಳೆಯ ಸರಕಾರಿ ಹೈಸ್ಕೂಲ್ ಆವರಣದಲ್ಲಿ ಸ್ಥಳೀಯ ಚಿರಂಜೀವಿ ಕ್ಲಬ್ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ನ.17ರಂದು ಆಯೋಜಿಸಿದ ರಕ್ತದಾನ ಶಿಬಿರ ಮತ್ತು ಉಚಿತ ಹೃದ್ರೋಗ ತಪಾಸಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕರಲ್ಲಿ ರಕ್ತದಾನದ ಬಗ್ಗೆ ಮಿಥ್ಯಾ ಕಲ್ಪನೆಗಳಿವೆ. ರಕ್ತದಾನ ಮಾಡಲು ಆತಂಕ, ಭಯ ಇದೆ. ಆದರೆ ಆರೋಗ್ಯವಂತ ಯಾವನೇ ವ್ಯಕ್ತಿಗೂ ರಕ್ತದಾನ ಮಾಡಬಹುದು. ಅದರಿಂದ ಯಾವುದೇ ತೋಂದರೆಗಳಿಲ್ಲ, ಬದಲು ಶಾರೀರಿಕ ಸಾಮರ್ಥ್ಯ ವರ್ಧನೆಯಾಗುತ್ತದೆ ಎಂದು ವೈದ್ಯೆ ಶಾಂಭವಿಕಿಶೋರ್ ನುಡಿದರು.
ಕುಂಬಳೆಯ ಜನಮೈತ್ರಿ ಪೋಲೀಸ್, ಶಾಂತಿಪಳ್ಳದ ಫ್ರೆಂಡ್ಶಿಪ್ ಬಾಯ್ಸ್, ಭಾಸ್ಕರ ನಗರದ ನವೋದಯ ಫ್ರೆಂಡ್ಸ್ ಕ್ಲಬ್, ವಿನಾಯಕ ಆರ್ಟ್ಸ್ ,ಸ್ಪೋರ್ಟ್ಸ್ ಕ್ಲಬ್ ಇವುಗಳ ಸಹಕಾರದಿಂದ ಮಂಗಳೂರು ಬ್ಲಡ್ ಹೆಲ್ತ್ ಲೈನ್ ಚ್ಯಾರಿಟಿ ಟ್ರಸ್ಟ್ ಮತ್ತು ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ
ಇವರು ಶಿಬಿರ ನಡೆಸಿಕೊಟ್ಟರು.
ಕುಂಬ್ಳೆ ಗ್ರಾ.ಪಂ. ಅಧ್ಯಕ್ಷೆ ತಾಹಿರಾ ಯೂಸುಫ್, ಕುಂಬ್ಳೆ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್, ಕುಂಬಳೆ ಪೋಲೀಸ್ ಠಾಣೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಕೆ.ಪ್ರಮೋದ್, ಜನಮೈತ್ರಿ ಪೋಲೀಸ್ ನ ಗೋವಿಂದನ್ ಕೆ, ಲೇಖಕ,ಪತ್ರಕರ್ತ ಎಂ.ನಾ.ಚಂಬಲ್ತಿಮಾರ್, ಜಿಎಸ್ ಬಿ ಎಸ್ ಕುಂಬ್ಳೆ ಮುಖ್ಯೋಪಾಧ್ಯಾಯ ವಿಜಯ ಕುಮಾರ್ ಪಿ, ಗ್ರಾ.ಪಂ ಸದಸ್ಯೆ ಪ್ರೇಮಾವತಿ ಸತೀಶ್ ಶೆಟ್ಟಿ, ಗ್ರಾ.ಪಂ. ಸದಸ್ಯ ಅನಿಲ್ ಕುಮಾರ್, ಬ್ಲಡ್ ಹೆಲ್ತ್ ಲೈನ್ ನ ಮೊಯ್ದು ಸೀತಾಂಗೋಳಿ, ಫ್ರೆಂಡ್ಶಿಪ್ ಬಾಯ್ಸ್ ಕ್ಲಬ್ಬಿನ ಅಧ್ಯಕ್ಷ ರಾಜೇಶ್, ನವೋದಯ ಕ್ಲಬ್ಬಿನ ಶ್ರೀನಿವಾಸ್ ಕೆ, ವಿವೇಕಾನಂದ ಕ್ಲಬ್ಬಿನ ಮನೋಜ್ ಕುಮಾರ್ ಡಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಚಿರಂಜೀವಿ ಕ್ಲಬ್ಬಿನ ಪ್ರಸಾದ್ ಕುಮಾರ್ ಕುಂಬ್ಳೆ ಸ್ವಾಗತಿಸಿದರು. ಕ್ಲಬ್ ಅಧ್ಯಕ್ಷ ಕೃಷ್ಣ ಗಟ್ಟಿ ಕುಂಬ್ಳೆ ಅಧ್ಯಕ್ಷತೆ ವಹಿಸಿದರು. ನಾರಾಯಣ ಕುಲಾಲ್ ವಂದಿಸಿದರು.