ಅಂಕಣ- ಪ್ರಕೃತಿ
❇️ ರಾಜು ಕಿದೂರು
*ನಮ್ಮೂರಿನ ಸಸ್ಯ ವೈವಿಧ್ಯತೆಯ ಕುರಿತು ತಿಳಿದಿರಲೇಬೇಕಾದ ಅನಿವಾರ್ಯತೆ ಇದೆ.ಸಂಪತ್ಭರಿತವೂ,ವೈಶಿಷ್ಟ್ಯತೆಯಿಂದಲೂ ಕೂಡಿರುವ ಅನೇಕ ಗಿಡ ಮರ ಬಳ್ಳಿಗಳನ್ನು ಅವಗಣಿಸಿದರೆ ಉಂಟಾಗುವ ನಾಶಕ್ಕೆ ಪರಿಹಾರ ಸಿಗಲಾರದು..
ಆದರೆ ನಮ್ಮ ನಡುವಣ ಹಸಿರ ಸಿರಿ ಸಂಪತ್ತಿನ ಬಗೆಗೆ ನಮಗೆಷ್ಟು ಗೊತ್ತಿದೆ..??
ಆ ಮರ ಯಾವುದು ಸರ್..?
ಪರಿಸರವನ್ನು ನಿರೀಕ್ಷಿಸಿ ಸಸ್ಯಗಳ ಹೆಸರುಗಳನ್ನು ಪಟ್ಟಿಮಾಡುವುದು ಎಂಬ ಮೂರನೇ ತರಗತಿಯ ಪರಿಸರ ಅಧ್ಯಯನದ ಚಟುವಟಿಕೆಗಾಗಿ ಮೈದಾನ ತಲುಪಿದ್ದೆವು.ಮಾವು,ಹಲಸು,ದಡ್ಡಾಲ,ಸಾಗುವಾನಿ,ಮರುವ ಮಂತಾದ ಮರಗಳನ್ನು ಮಕ್ಕಳು ಗುರುತಿಸಿದರು.ಮೇ ಫ್ಲವರ್ ಮರದ ಬಗ್ಗೆಯೂ ಹೇಳಿದರು.ಹೀಗೆ ಪಟ್ಟಿ ಮುಂದುವರಿಯುತ್ತಿರಲು ಶ್ರೇಯ,ಗಟ್ಟಿ ಧ್ವನಿಯಲ್ಲಿ,”ಸರ್,ಆ ಮರ ಯಾವುದು.?”
ಪಿಂಕ್ ಬಣ್ಣದ ಹೂವುಗಳಿಂದ ಶೃಂಗಾರಗೊಂಡಿದ್ದ ಮರವನ್ನು ನೋಡಿ ಮಕ್ಕಳೆಲ್ಲರೂ ಕಣ್ತುಂಬಿಸಿಕೊಂಡರು. ಮೈದಾನದ ಮೂಲೆಯಲ್ಲಿ ಹೊಳೆ ದಾಸವಾಳದ ಸಾಮಾನ್ಯ ಎತ್ತರದ ಮರವೊಂದು ಕಲರ್ ಫುಲ್ ಆಗಿ ಶೋಭಿಸುತ್ತಿದ್ದದ್ದನ್ನು ಮೊತ್ತಮೊದಲು ಗಮನಿಸಿದ ಶ್ರೇಯಸ್ಸು ಶ್ರೇಯಳ ಪಾಲಾಯಿತು.!
ಸುತ್ತಮುತ್ತಲ ಮರ,ಗಿಡ,ಬಳ್ಳಿಗಳ ಪರಿಚಯ ಮಕ್ಕಳಿಗೆ ಇರಲೇ ಬೇಕು ಎನ್ನುತ್ತಾರೆ ಪರಿಸರ ಶಾಸ್ತ್ರಜ್ಞರು.ಇದು ಮಕ್ಕಳಲ್ಲಿ ನಿರೀಕ್ಷಣೆಯ ಸಾಮರ್ಥ್ಯವನ್ನು ಬೆಳೆಸಿ ಪರಿಸರ ಪ್ರೀತಿಯ ಬೀಜ ಮೊಳಕೆಯೊಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದು ಅವರ ವಾದ.ನಮ್ಮ
ಹಿರಿಯರು ತಮ್ಮ ಸ್ವಂತ ಅನುಭವದಿಂದ ಅದೆಷ್ಟೋ ಮಾಹಿತಿಯನ್ನು ಪಡೆದಿರುತ್ತಾರೆ.ಆದರೆ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಹಿರಿಯರ ಅನುಭವಾಮೃತವನ್ನು ಪಡೆದುಕೊಳ್ಳಲು ಸಮಯವೇ ಇಲ್ಲದಾಗಿದೆ.ಯಾಕೆಂದರೆ ಯುಟ್ಯೂಬ್ ಅಪ್ಪ ಹಾಗೂ ಗೂಗಲ್ ಅಮ್ಮ ಎಲ್ಲವನ್ನೂ ಹೇಳಿಕೊಡುತ್ತಾರೆ ಎಂಬ ಕುರುಡು ಭ್ರಮೆಯಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ!
- ಸಾಮಾನ್ಯವಾಗಿ ಹಣ್ಣು,ತರಕಾರಿ ಮತ್ತು ಹೂವಿನ ಗಿಡಗಳ ಪರಿಚಯ ಮಕ್ಕಳಿಗೆ ಇರಬಹುದು.ಆದರೆ ಮನೆ ಪಕ್ಕದಲ್ಲಿ ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ,ಮನೆ ಮದ್ದಿಗೆ ಅಗತ್ಯವಾದ,ಶುಧ್ಧ ಗಾಳಿಯನ್ನು ಉಚಿತವಾಗಿ ನೀಡುವ,ಬಣ್ಣ ಬಣ್ಣದ ಹೂವುಗಳಿಂದ ಜೇನುನೊಣಗಳನ್ನು ತನ್ನತ್ತ ಸೆಳೆಯುವ,ಹಸಿರ ಸಿರಿಗೆ ಮುಕುಟವನ್ನು ಹೊದಿಸುವ ಕಾಡು ಮರ,ಸಸ್ಯ,ಗಿಡ ಬಳ್ಳಿಗಳ ಬಗ್ಗೆ ಮಕ್ಕಳು ತಿಳಿದಿರುವುದೆಷ್ಟು.?ತಿಳಿಯದಿರುವುದೆಷ್ಟು.?
ಪೇಟೆಯಲ್ಲಿ ಸುಲಭವಾಗಿ ಸಿಗುವ ಆದರೆ ಅಷ್ಟೇ ಬೆಳೆಯುಳ್ಳ ಹಣ್ಣುಗಳು ರಾಸಾಯನಿಕ ಸಿಂಪಡಿಸದೆ ಹಣ್ಣಾಗಲಾರವು ಎಂಬುವುದು ಓಪನ್ ಸೀಕ್ರೆಟ್.ಸಾಮನ್ಯವಾಗಿ ಮನೆಯ ಅಕ್ಕ ಪಕ್ಕ ಸಿಗಬೇಕಾದ ಸೀತಾಫಲ,ಪಪ್ಪಾಯ,ಜಂಬುನೇರಳೆ,ನೇರೆಳೆ,ಪೇರಳೆ,ಪುನರ್ಪುಳಿ,ನೆಲ್ಲಿ,ರಾಜ ನೆಲ್ಲಿ ಮುಂತಾದ ಹಣ್ಣುಗಳಿಗೂ ಇಂದು ಪೇಟೆಯನ್ನು ಆಶ್ರಯಿಸಬೇಕಾದ ದುರವಸ್ಥೆ ನಮ್ಮದು.ದುಡ್ಡು ಕೊಟ್ಟರೆ ಸಿಗುತ್ತವೆಯಲ್ಲವೇ ಎಂಬ ಡೊಂಕು ವಾದ ಮಂಡಿಸಲೂ ನಮ್ಮ ನಡುವೆ ಜನರಿದ್ದಾರೆ.ಮನೆ ಸಮೀಪದಲ್ಲಿ ಕಾಡು ಹಣ್ಣುಗಳು ಧಾರಾಳವಾಗಿಲ್ಲದಿದ್ದರೆ ಮತ್ತೆ ಹೇಗೆ ತಾನೇ ಅವುಗಳ ಪರಿಚಯವನ್ನು ನಾವು ಕಿರಿಯರಿಗೆ ತಲುಪಿಸಲಿ ಎಂಬುವುದನ್ನೂ ಅಲ್ಲಗಳೆಯುವಂತಿಲ್ಲ.
ಶಾಂತಿ ಮರದ ಕಾಯಿಗಳನ್ನು ಒಡೆದಾಗ ಅದರೊಳಗಿರುವ ತಿರುಳನ್ನು ಯಾರೆಲ್ಲಾ ತಿಂದಿದ್ದೀರಿ.? ಮನೆ ಪರಿಸರದಿಂದ ದೂರವಾಗುತ್ತಿರುವ ಗೇರು ಹಣ್ಣುಗಳನ್ನು ಈ ವರುಷ ಎಷ್ಟು ಮಂದಿ ತಿಂದಿರಬಹುದು.? ಹೀಗೆ ಎಪ್ಪತ್ತು ದಾಟಿದ ನೆರೆಮನೆಯ ಲೀಲಕ್ಕ ಕೇಳಿದಾಗ ನನ್ನಲ್ಲಿ ಉತ್ತರವಿರಲಿಲ್ಲ.ಇಂತಹ ಮಾಹಿತಿಗಳನ್ನು ಕಲೆ ಹಾಕಿದಾಗ ನಮಗೆ ಆ ಮರಗಳ ಪ್ರಾಧಾನ್ಯತೆ ಅರಿವಿಗೆ ಬರುತ್ತದೆ.ಮನೆಯ ಎದುರು ಮಾವಿನ ಮರ ಇರಬಾರದೆಂದೂ,ಆಟಿ ಅಮವಾಸ್ಯೆಯ ಕಷಾಯಕ್ಕೆ ಅಗತ್ಯವಾದ ಪಾಲೆ ಮರದಲ್ಲಿ ಅದ್ಯಾರೋ ವಾಸಿಸುತ್ತಾರೆ ಎಂಬಂತಹ ಹಲವಾರು ಅಸತ್ಯಗಳನ್ನು ನಾವು ಮಕ್ಕಳ ಮೃದು ಮನಸ್ಸಲ್ಲಿ ವಿವಿಧ ಸಂದರ್ಭದಲ್ಲಿ ಬಿತ್ತುತ್ತಿದ್ದೇವೆ.ಹಾಗಾದರೆ ಹಸಿರಿನ ಬಗ್ಗೆ ಅವರಲ್ಲಿ ಯಾವ ರೀತಿಯ ನಿರೀಕ್ಷೆಯನ್ನು ನಮಗಿಟ್ಟುಕೊಳ್ಳಬಹುದು.?
ವೃಕ್ಷ ಸಂಪತ್ತು ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಇಂದಿನ ಮಕ್ಕಳ ಹಾಗೂ ಯುವ ಜನಾಂಗದ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ.ವೈವಿದ್ಯಮಯ ರೀತಿಯ ಸಸ್ಯ ಸಂಪತ್ತಿನಿಂದ ಕೂಡಿದ
ಕಿರು ಅರಣ್ಯದ ನಡುವೆ ಉಸಿರಾಡಲು ಶುಧ್ದ ಗಾಳಿ,ವಿಷವಿಲ್ಲದ ಆಹಾರ ಹಾಗೂ ಕೃಷಿಗೆ ಫಲವತ್ತಾದ ಮಣ್ಣಿನೊಂದಿಗೆ ಕುಡಿಯಲು ಅತ್ಯಂತ ಶುಧ್ದ ನೀರು ದೊರಕಿದರೆ ಮತ್ತಿನ್ನೇನು ಬೇಕು ಹೇಳಿ.? ಅದಕ್ಕಾಗಿ ಹಸಿರನ್ನು ಪ್ರೀತಿಸುವ,ವೃಕ್ಷ ಸಂಪತ್ತನ್ನು ಉಳಿಸುವ,ಸಸ್ಯಗಳನ್ನು ಪೂಜಿಸುವ ಮನಸುಗಳ ಸಂಖ್ಯೆ ಹೆಚ್ಚಾಗಬೇಕಿದೆ.
ಅವರಿವರಿಂದ ಕೇಳಿದ್ದು ಮತ್ತು ಅದೆಲ್ಲಿಯೋ ಓದಿದ್ದು…
- ಬಿಲ್ವ ಪತ್ರೆಯ ಗಿಡವೊಂದನ್ನು ನೆಟ್ಟು ಬೆಳೆಸಿದರೆ ದೇವಸ್ಥಾನವೊಂದನ್ನು ಕಟ್ಟಿದ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ.
- ಹಸಿರು ಪಾರಿವಾಳಗಳಿಗೆ ಮರುವ ಮರದ ಬೆಲ್ಲದ ರುಚಿಯ ಹಣ್ಣುಗಳೆಂದರೆ ಬಹಳ ಇಷ್ಟ.
- ಫೆವಿಕಾಲ್ ಬರುವುದಕ್ಕಿಂತ ಮೊದಲು ಗೇರು ಮರದ ಗೋಂದ್ ಬಾಟಲ್ ಗಳು ಹಳ್ಳಿಯ ಎಲ್ಲಾ ಮನೆಗಳಲ್ಲಿ ಇರುತ್ತಿದ್ದವು.
- ನೇರಳೆ ಹಣ್ಣನ್ನು ನೇಚರ್ಸ್ ಬ್ಲಡ್ ಬ್ಯಾಂಕ್ ಎಂದು ಕರೆಯುತ್ತೇವೆ.
- ಕುಲವೃಕ್ಷದ ಮರಗಳನ್ನು ರಕ್ಷಣೆ ಮಾಡಿದರೆ ಆ ಮರಗಳು ಕುಟುಂಬವನ್ನು ಕಾಪಾಡುತ್ತವೆ ಎಂಬ ನಂಬಿಕೆ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿದೆ.
- ಅತ್ತಿ ಮರಕ್ಕಿರುವ ವಿಶೇಷ ಗುಣಗಳಿಂದಾಗಿ ಅದನ್ನು ರಾಣಿ ವೃಕ್ಷ ಎಂದು ಕರೆಯುತ್ತೇವೆ.
- ಹಲಸು ಆನೆಗೆ ಅತ್ತಿ ಮೊಸಳೆಗೆ ಬಲು ಇಷ್ಟದ ಫಲಗಳಾಗಿವೆ.
- ರಕ್ತ ಚಂದನ ಮರಕ್ಕೆ ವಾಟರ್ ಬಜೆಟಿಂಗ್ ಮಾಡುವ ಉಪಾಯ ತಿಳಿದಿದೆ.
- ಹಳ್ಳ,ನದಿ,ತೋಡುಗಳ ಬದಿಗಳಲ್ಲಿ ಕಂಡು ಬರುವ ಹೊಳೆ ಮತ್ತಿ ಮರವು ಅಲ್ಲಿರುವ ಜಲಚರಗಳಿಗೆ ಹೃದಯ ತಜ್ಞರ ಕೆಲಸವನ್ನು ಮಾಡಿಕೊಡುತ್ತದೆ.
- ಕಾಡಿನ ಬದಿಯಲ್ಲಿ ಯಥೇಚ್ಛವಾಗಿ ಬೆಳೆಯುವ ದಡ್ಡಾಲದ ಮರಗಳು ಪ್ರಾಕೃತಿಕವಾಗಿ ಫಯರ್ ಲೈನ್ ನ ಕೆಲಸವನ್ನು ನಿರ್ವಹಿಸುತ್ತವೆ.
ಲೇಖಕ ರಾಜು ಕಿದೂರು ಅವರು ಕುಂಬ್ಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿಶಾಲಾ ಅಧ್ಯಾಪಕರು, ಪರಿಸರ ಕಾರ್ಯಕರ್ತರು.