ಕಣಿಪುರ ಸುದ್ದಿಜಾಲ
ಕೇಂದ್ರ-ರಾಜ್ಯ ಸರಕಾರೀ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅನೇಕರಿಂದ ಲಕ್ಷಾಂತರ ರೂ ಪಡೆದು ಪಂಗನಾಮ ಹಾಕಿ ವಂಚಿಸಿದ ಡಿವೈಎಫ್ಐ ನಾಯಕಿ, ಅಧ್ಯಾಪಕಿ ಸಚಿತಾರೈ(27) ನಡೆಸಿದ ಮೋಸದ ದಂಧೆಗೆ ಸಿಲುಕಿ ಮಹಿಳೆಯೊಬ್ಬರು ಆತ್ಮಹತ್ಯೆಗೈದ ಘಟನೆ ನಡೆದರೂ ಈ ಪ್ರಕರಣದಲ್ಲಿ ಪೋಲೀಸರಾಗಲೀ, ವಿವಿಧ ರಾಜಕೀಯ ಸಾಮಾಜಿಕ ಸಂಘಟನೆಗಳಾಗಲೀ ವಂಚನೆಗೊಳಗಾದ ಸಂತ್ರಸ್ಥರಿಗೆ ನ್ಯಾಯ ಕೊಡಿಸಲು ಮುಂದಾಗದೇ ಇರುವುದೇಕೆ…???
ಇದು ಸಾರ್ವಜನಿಕರನ್ನು ಕಾಡುತ್ತಿರುವ ಯಕ್ಷಪ್ರಶ್ನೆ…!!
ಕಾಸರಗೋಡಿನ ಕೇಂದ್ರೀಯ ತೋಟಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್ ಐ) ಮತ್ತು ಕೇಂದ್ರೀಯ ವಿದ್ಯಾಲಯ ಸಹಿತ ಹಲವೆಡೆ ಹಲವರಿಗೆ ಉದ್ಯೋಗ ಕೊಡಿಸುವ ಭರವಸೆಯೊಡ್ಡಿ ಪ್ರತಿಯೊಬ್ಬರಿಂದಲೂ ಲಕ್ಷಾಂತರ ಪಡೆದು ಒಂದೂವರೆ ಕೋಟಿಗೂ ಅಧಿಕ ವಂಚಿಸಿದ ಡಿವೈಎಫ್ ಐ ನಾಯಕಿ , ಪುತ್ತಿಗೆ ಬಾಡೂರು ಶಾಲಾಧ್ಯಾಪಕಿ ಸಚಿತಾ ರೈ ಮಾಡಿದ ವಂಚನೆಯ ಕುರಿತಾದ ತನಿಖೆ ಕುಂಟುತ್ತಿರುವುದೇಕೆ…?
ಪ್ರಕರಣದಲ್ಲಿ ವಂಚನೆ ಎಸಗಿದ ಆರೋಪಿ ಸಚಿತಾಳ ಬಂಧನ ಈಗಾಗಲೇ ನಡೆದಿದ್ದರೂ ಈ ತನಕ ಆಕೆಯನ್ನು ಪೋಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿಲ್ಲ. ಮೋಸದ ಕುರಿತಾದ ಯಾವೂದೇ ತನಿಖೆ ಪ್ರಗತಿ ಪಡೆದಿಲ್ಲ. ಸುಮಾರು 18ಮಂದಿ ತಾವು ಮೋಸಕ್ಕೆ ಒಳಗಾಗಿ ಲಕ್ಷಾಂತರ ಕಳಕೊಂಡೆವು ಎಂದು ಲಿಖಿತ ದೂರಿದ್ದರೂ ದೂರುದಾತರಿಗೆ ನ್ಯಾಯ ಕೊಡಿಸಲು ಪೋಲೀಸರಿನ್ನೂ ಮುಂದಾಗಿಲ್ಲ. ಹಾಗೆಯೇ ಸಂತ್ರಸ್ಥರ ಸಹಾಯಕ್ಕೆ ಯಾವೊಂದು ರಾಜಕೀಯ,ಸಾಮಾಜಿಕ ಸಂಘಟನೆಗಳೂ ಮುಕ್ತವಾಗಿ ಇಳಿಯಲೇ ಇಲ್ಲ ಎಂಬುದು ಇಡೀ ಪ್ರಕರಣದಲ್ಲಿ ಹಲವು ಗುಮಾನಿಗಳಿಗೆ ಕಾರಣವಾಗಿದೆ.
ವಂಚನಾ ದೂರುಗಳು ಹೆಚ್ಚುತ್ತಿರುವಂತೆಯೇ ತಲೆಮರೆಸಿಕೊಂಡಿದ್ದ ಆರೋಪಿ ಸಚಿತಾ ರೈಯನ್ನು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಪೋಲೀಸರು ಬಂಧಿಸಿದ್ದರು. ತನ್ನ 3ತಿಂಗಳ ಎಳೆ ಹಸುಳೆಯೊಂದಿಗೆ ಆಕೆಯನ್ನು ಕಣ್ಣೂರು ಜೈಲಿಗೆ ಕರೆದೊಯ್ಯಲಾಗಿತ್ತು. ಇದಾಗಿ 3ವಾರ ದಾಟಿದರೂ ಆಕೆಯನ್ನು ಈ ತನಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಮತ್ತು ಪ್ರಕರಣದ ತನಿಖೆ ನಡೆಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಕೆಲಸಗಳಾಗಲೇ ಇಲ್ಲ. ಇದೇ ವೇಳೆ ಇದನ್ನು ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಪ್ರಶ್ನಿಸಲೂ ಇಲ್ಲ ಎಂಬುದೇ ಪ್ರಕರಣದಲ್ಲಿ ಸಂದೇಹಕ್ಕೆ ಕಾರಣವಾಗಿದೆ.
ಸಚಿತಾ ರೈ ವಿರುದ್ಧ ಬದಿಯಡ್ಕ ಠಾಣೆಯಲ್ಲಿ 11, ಆದೂರು 2, ಮಂಜೇಶ್ವರ,ಕುಂಬ್ಳೆ,ಕಾಸರಗೋಡು, ಮೇಲ್ಪರಂಬ, ಅಂಬಲತ್ತರ ಠಾಣೆಗಳಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು 18ಕೇಸು ದಾಖಲಾಗಿವೆ. ಸುಮಾರು 10ಕ್ಕೂ ಅಧಿಕ ಮಂದಿ ಮೋಸಕ್ಕೊಳಗಾದ ಇತರರಿದ್ದರೂ ಅವರಿನ್ನೂ ಕಾನೂನು ವಿಧೇಯ ಕೇಸು ನೀಡಿಲ್ಲ. ಒಟ್ಟು ಸುಮಾರು 3ಕೋಟಿಯಷ್ಟು ವಂಚನೆ ನಡೆದಿದೆಯೆಂದು ಅಂದಾಜಿಸಲಾದ ಪ್ರಕರಣದಲ್ಲಿ 30ಕ್ಕೂ ಅಧಿಕ ಸಂತ್ರಸ್ಥರಿದ್ದಾರೆ. ಉದ್ಯೋಗದಾಸೆಯಿಂದ ಕೂಡಿಟ್ಟ ಹಣವನ್ನೆಲ್ಲಾ ಕೊಟ್ಟು ಕೈಸುಟ್ಟುಕೊಂಡ ಸಂತ್ರಸ್ಥ ನಾಗರಿಕರ ಪರ ಪ್ರತ್ಯಕ್ಷ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಡಲು ಸಾಮಾಜಿಕ ಕಳಕಳಿಯುಳ್ಳವರು ಹಿಂಜರಿಯುವುದೇಕೆ??
ನಾಗರಿಕರ ಈ ಪ್ರಶ್ನೆಗೆ ಉತ್ತರಿಸಬೇಕಾದವರನ್ನು ಯಾರೂ ಪ್ರಶ್ನಿಸದೇ, ಪ್ರಕರಣವೇ ಹಳ್ಳ ಹಿಡಿಯುವ ಲಕ್ಷಣ ಕಂಡುಬರುತ್ತಿದೆ.
ಸಚಿತಾ ರೈಯ ಬಣ್ಣ,ಬಣ್ಣದ ಆಮಿಷಗಳ ಮಾತಿಗೆ ಮರುಳಾಗಿ ಎಲ್ಲೆಲ್ಲಿಂದಲೋ ಹಣ ಹೊಂದಿಸಿ ಕೊಟ್ಟವರೇ ಅಧಿಕ. ಸಾಲ ಪಡೆದು ಕೂಡಾ ಕೊಟ್ಟವರಿದ್ದಾರೆ. ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ ಮನನೊಂದು ಹತಾಶೆಯಿಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿದ್ದಾರೆ. ಇಷ್ಟಾಗಿಯೂ ಸಾಮಾಜಿಕ ಕಳಕಳಿಯಿಂದ ಸಂತ್ರಸ್ಥರ ಪರವಾಗಿ ಯಾರೂ ಹೋರಾಟಕ್ಕಿಳಿಯುವುದಿಲ್ಲ ಎಂದರೆ ಏನರ್ಥ??