ಕುಂಬ್ಳೆಯವರು ತಾಯ್ನೆಲದ ಪರಂಪರೆಯನ್ನು ಮೆರೆದ ಕಲಾವಿದ: ಎಂ.ನಾ.

ಯಕ್ಷಾಂಗಣ ನುಡಿಹಬ್ಬದಲ್ಲಿ ಅಗಲಿದ ಮಹನೀಯರ ಸಂಸ್ಮರಣೆ, ಸಾಧಕರಿಗೆ ಸನ್ಮಾನ

by Narayan Chambaltimar

ಕ:ಣಿಪುರ ಸುದ್ದಿಜಾಲ, ಮಂಗಳೂರು

ಕುಂಬಳೆಯ ಹೆಸರನ್ನು ಮೆರೆಸುತ್ತಲೇ ಯಕ್ಷಗಾನದ ತಾಯ್ನೆಲದ ಪರಂಪರೆಯ ನೆರಳಲ್ಲಿ ರಾರಾಜಿಸಿದವರು ಕುಂಬಳೆ ಶ್ರೀಧರ ರಾಯರು. ಹಾಸ್ಯಗಾರನ ಪಾತ್ರ ಮತ್ತು ಬಣ್ಣದ ವೇಷಧಾರಿಯ ಪಾತ್ರಗಳೆರಡನ್ನು ಬಿಟ್ಟು ಉಳಿದೆಲ್ಲ ಪಾತ್ರಗಳನ್ನು ರಸೋಚಿತವಾಗಿ ನಿರ್ವಹಿಸುತ್ತಲೇ, ವ್ಯಕ್ತಿಗತ ಸಂಬಂಧಗಳಿಗೆ ಮೌಲ್ಯವನ್ನಿತ್ತು ವ್ಯವಹಾರಿಕವಲ್ಲದ ಜೀವನಸಂಬಂಧ ಬೆಳೆಸಿದ ಅಪರೂಪದ ಕಲಾವಿದರವರು. ಅವರು ಯಕ್ಷಗಾನದ ಗತ ಪರಂಪರೆಯ ಕಲಾಸಂಸ್ಕಾರಗಳ ಪ್ರಾತಿನಿಧಿಕ ಕಲಾವಿದ. ಅವರನ್ನು ಸ್ಮರಿಸುವ ಮೂಲಕ ಅಂಥ ವ್ಯಕ್ತಿತ್ವಗಳನ್ನು ಭವಿಷ್ಯಕ್ಕೆ ಕೈ ದಾಟಿಸಬೇಕೆಂದು ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್ ನುಡಿದರು.

ಮಂಗಳೂರು ಯಕ್ಷಾಂಗಣ ಮತ್ತು ಯಕ್ಷಭಾರತಿ ಪುತ್ತೂರು ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರಿನ ಕದ್ರಿ ದೇವಾಲಯದಂಗಣದಲ್ಲಿ ನಡೆಯುವ 12ನೇ ವರ್ಷದ ಯಕ್ಷಾಂಗಣ ನುಡಿಹಬ್ಬ -ತಾಳಮದ್ದಳೆ ಸಪ್ತಾಹದ 4ನೇ ದಿನ ಅವರು ಅಗಲಿದ ಹಿರಿಯ ಕಲಾವಿದ ದಿ.ಕುಂಬ್ಳೆ ಶ್ರೀಧರ ರಾವ್ ಅವರನ್ನು ಸಂಸ್ಮರಿಸಿ ಮಾತನಾಡಿದರು.

ತೆಂಕುತಿಟ್ಟಿನ ಮೂಲನೆಲವಾದ ಕುಂಬ್ಳೆಯ ಹೆಸರನ್ನು ವರ್ತಮಾನದಲ್ಲಿ ಬೆಳಗಿಸಿ, ಮೆರೆಸಿದವರು ಕುಂಬ್ಳೆ ಸುಂದರರಾವ್ ಮತ್ತು ಶ್ರೀಧರರಾಯರು. ಅವರಿಬ್ಬರೂ ಅಗಲುವ ಮೂಲಕ ಕುಂಬ್ಳೆಯ ಹೆಸರನ್ನು ಮೆರೆಸಲು ಮತ್ತು ಮೆರೆಯಲು ಕುಂಬ್ಳೆಯಲ್ಲಿ ಕಲಾವಿದರೇ ಇಲ್ಲ! ಈ ಮೂಲಕ ಕುಂಬ್ಳೆಯ ಯಕ್ಷಗಾನದ ಕಣ್ಣುಗಳೆರಡೂ ಮಂಜಾಗಿದೆ. ದುರಂತ ಮತ್ತು ವಿಷಾದ ಎಂದರೆ ವರ್ತಮಾನದ ಕಲಾಭಿಮಾನಿಗಳಿಗೆ ಪಾರ್ತಿಸುಬ್ಬನೇ ಕುಂಬ್ಳೆಯವನೆಂದು ಗೊತ್ತಿಲ್ಲ. ಕುಂಬ್ಳೆ ಸೀಮೆಯೆಂದರೆ ಯಕ್ಷಗಾನದ ತವರು. ಅಲ್ಲಿನ ಕಲಾವಿದರನ್ನುಈಗೀಗ ಕೇರಳದ ಕಲಾವಿದರೆಂದು ಗುರುತಿಸುವುದೇ ವಿಷಾದನೀಯ. ತುಳುವರು,ಕನ್ನಡಿಗರು ತಮ್ಮದೇ ನಾಡಿನ ಸಾಂಸ್ಕೃತಿಕ ಸೌರಭವನ್ನು ಮರೆಯುವುದು ವಿಷಾದಕರ ಎಂದು ಎಂ.ನಾ.ನುಡಿದರು.

ಕಾರ್ಯಕ್ರಮವನ್ನು ಸಿ.ಎ.ಶಾಂತಾರಾಮ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನದಲ್ಲಿ ಮಕ್ಕಳನ್ನು ತೊಡಗಿಸಿಕೊಂಡರೆ ಮಾತ್ರವೇ ಅವರ ಜೀವನದಲ್ಲಿ ಮಾನವನ ಮೌಲ್ಯ ಮೈಗೂಡೀತು ಎಂದವರು ಹೇಳಿದರು.
ಸಮಾರಂಭದಲ್ಲಿ ಧಾರ್ಮಿಕ ಮುಂದಾಳು, ಆಳಪೆ -ಕಾರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್ ಕೊಟ್ಟಾರಿ ಅವರನ್ನು ಯಕ್ಷಾಂಗಣ ಸನ್ಮಾನವಿತ್ತು ಗೌರವಿಸಲಾಯಿತು.

 

ವೇದಿಕೆಯಲ್ಲಿ ಹರಿದಾಸ, ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಳು, ಉದ್ಯಮಿ ಜಿ.ಸುಂದರ ಆಚಾರ್ಯ ಬೆಳುವಾಯಿ, ಸುಂದರ ಶೆಟ್ಟಿ ಬೆಟ್ಟಂಪಾಡಿ, ಲಕ್ಷ್ಮೀ ನಾರಾಯಣ ರೈ ಹರೇಕಳ ಮೊದಲಾದವರಿದ್ದರು.
ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ , ಸಂಯೋಜಕ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.

ಬಳಿಕ ವಾಣಿವಿಲಾಸ ಯಕ್ಷಬಳಗ ಕಟೀಲು ಇವರಿಂದ ತ್ರಿಶಂಕುಸ್ವರ್ಗ ತಾಳಮದ್ದಳೆ ನಡೆಯಿತು. ಭಾಗವತರಾಗಿ ರವಿಕೃಷ್ಣ ದಂಬೆ, ಹಿಮ್ಮೇಳದಲ್ಲಿ ಮಣಿಮುಂಡ ಸುಬ್ಲಹ್ಮಣ್ಯ ಶಾಸ್ತ್ರಿ, ರಾಮಹೊಳ್ಳ ಭಾಗವಹಿಸಿದರು. ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಸರ್ಪಂಗಳ ಈಶ್ವರ ಭಟ್, ವಿನಯಾಚಾರ್ ಹೊಸಬೆಟ್ಟು, ಪಶುಪತಿ ಶಾಸ್ತ್ರಿ, ಉಮೇಶ ನೀಲಾವರ ಪಾಲ್ಗೋಂಡರು.

 

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00